‘ಇಂದಿನ ಯುವ ಪೀಳಿಗೆಗೆ ವಿಶ್ವೇಶ್ವರಯ್ಯ ಆದರ್ಶಪ್ರಾಯರು’
ಚಿಕ್ಕಮಗಳೂರು, ಸೆ.15: ರಾಜ್ಯದ ಪ್ರಮುಖ ಯಶಸ್ವಿ ನೀರಾವರಿ ಯೋಜನೆಗಳ ಮೂಲಕ ವಿಶ್ವದ ಗಮನ ಸೆಳೆದ ಶಿಸ್ತಿನ ಸಿಪಾಯಿ ಸರ್.ಎಂ.ವಿ ಇಂದಿನ ಯುವಪೀಳಿಗೆಯ ಆದರ್ಶಪ್ರಾಯರು ಎಂದು ಕರ್ನಾಟಕ ಇಂಜಿನಿಯರ್‌ಗಳ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ.ಶಿವಪ್ರಕಾಶ್ ತಿಳಿಸಿದರು.
ಸರ್.ಎಂ.ವಿಶ್ವೇಶ್ವರಯ್ಯನವರ 156ನೆ ಜನ್ಮದಿನಾಚರಣೆ ಅಂಗವಾಗಿ ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಸರ್‌ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಸ್ತೆ ನಿರ್ಮಾಣ, ಕೈಗಾರಿಕೆ, ಪ್ರವಾಸೋದ್ಯಮ, ವಿದ್ಯುತ್‌ಶಕ್ತಿ ಸೇರಿದಂತೆ ವಾಣಿಜ್ಯ ಉದ್ಯಮಗಳ ಬಗ್ಗೆ ಹೆಚ್ಚು ಗಮನಹರಿಸಿ ರಾಜ್ಯದ ಅಭಿವೃದ್ದಿಗೆ ಸುಗಮ ಹಾದಿಯ ಮೂಲಕ ದಿಟ್ಟ ನಿರ್ಧಾರಗಳನ್ನು ಕೈಗೊಂಡು ವಿಶ್ವದ ಗಮನ ಸೆಳೆದ ಮಹಾನ್ ಇಂಜಿನಿಯರ್ ಸರ್‌ಎಂವಿ ಎಂದು ಬಣ್ಣಿಸಿದರು.
ಇಂದಿನ ಯುವ ಪೀಳಿಗೆ ಸರ್‌ಎಂವಿ ಹಾದಿಯಲ್ಲಿ ನಡೆಯಲು ಮುಂದಾಗಿ ದೇಶದ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಪಣತೊಡಬೇಕು. ರಾಷ್ಟ್ರದ ಅಭಿವೃದ್ದಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದಾಗಿದ್ದು ಅದನ್ನರಿತು ರಾಜ್ಯ ಇಂಜಿನಿಯರ್‌ಗಳ ಸಂಘದಿಂದ ಹಲವು ಕಾರ್ಯಗಳನ್ನು ಏರ್ಪಡಿಸಿ ಯುವಪೀಗೆಗೆ ಅಗತ್ಯವುಳ್ಳ ಮಾಹಿತಿಗಳನ್ನು ನೀಡಿ ಸಹಕರಿಸಲಾಗುತ್ತಿದೆ ಎಂದರು. ದೂರ ದೃಷ್ಟಿ ಹೊಂದಿ ನಿರ್ಮಾಣ ಮಾಡಿರುವ ತುಂಗಭದ್ರ, ಕನ್ನಂಬಾಡಿ, ಶರಾವತಿ ಜಲಾಶಯಗಳು ಸೇರಿದಂತೆ ರಾಜ್ಯದ ಜನರಿಗೆ ಅತ್ಯಗತ್ಯವಾದ ಹಲವು ಅಭಿವೃದ್ದಿ ಯೋಜನೆಗಳು ಇಂದು ಸಹ ಸರ್‌ಎಂವಿ ಹೆಸರನ್ನು ಸಾರಿ ಹೇಳುತ್ತಿದೆ ಎಂದರೆ ಅವರ ಕೊಡುಗೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.
ನಾವು ಮಾಡುವ ಕೆಲಸದಲ್ಲಿ ಸ್ವಾರ್ಥಬಿಟ್ಟು ಸಮಾಜಮುಖಿ ಚಿಂತನೆಯಿಂದ ಜಿಲ್ಲೆಯ ಅಭಿವೃದ್ದಿಗೆ ತೊಡಗಿಸಿಕೊಂಡರೆ ಸರ್‌ಎಂವಿ ದಿನಾಚರಣೆಗೂ ಅರ್ಥಬರುತ್ತದೆ ಎಂದರು.
ಹಾಸನ ಕಾರ್ಯಪಾಲಕ ಇಂಜಿನಿಯರ್ ಕೆ.ಎನ್.ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ರವೀಂದ್ರ, ಚಂದ್ರಮೌಳಿ, ಸಹಾಯಕ ಇಂಜಿನಿಯರ್ ಹರೀಶ್, ಗುರುರಾಜ್, ಹುಲಿಯಪ್ಪಗೌಡ, ದಾವುದ್, ರವಿ, ಸುದರ್ಶನ್, ಜಯಪ್ರಕಾಶ್, ಶರ್ಮಾ, ಸತೀಶ್ ಇತರರು ಹಾಜರಿದ್ದರು.