ಮಂಗಳೂರು ವಿವಿ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಪ್ರಕರಣ: ಪೊಲೀಸರ ಮೌನ; ಪೋಷಕರಲ್ಲಿ ಮುಗಿಯದ ಆತಂಕ
♦ ಆರೋಪಿಯ ಪರವಾಗಿ ಗಣ್ಯರ ಒತ್ತಡ ♦ ಪ್ರತಿಭಟನೆಗೆ ನಿರ್ಧಾರ
ಮಂಗಳೂರು, ಸೆ.15: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಸಯನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಕ್ಯಾಮರಾ ರೆಕಾರ್ಡಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ವಿವಿಯ ವಿದ್ಯಾರ್ಥಿ ಎಂ.ಸಂತೋಷ್ ಆಚಾರ್ಯನಿಗೆ ಜಾಮೀನು ಸಿಕ್ಕಿದ ಬೆನ್ನಿಗೇ ವಿವಿಯ ವಿದ್ಯಾರ್ಥಿನಿಯರ ಪೋಷಕರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸರಾಗಲಿ, ವಿಶ್ವವಿದ್ಯಾನಿಲಯದ ಸಿಬ್ಬಂದಿ ಯಾಗಲಿ ಪ್ರಕರಣದ ಪೂರ್ಣ ವಿವರಗಳನ್ನು ನೀಡುತ್ತಿಲ್ಲ, ಅವರು ಪ್ರಕರಣವನ್ನು ಮುಚ್ಚಿ ಹಾಕಿ ಆರೋಪಿಯನ್ನು ರಕ್ಷಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರ ಪಾಲಕರು ದೂರಿದ್ದಾರೆ.
ಕ್ಯಾಮರಾದಲ್ಲಿ ವಿದ್ಯಾರ್ಥಿನಿಯರನ್ನು ಚಿತ್ರೀಕರಿಸ ಲಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ ಅಧಿಕಾರಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕವನ್ನು ಹೊಂದಿದ್ದೇವೆ. ಇದೇ ಸಂದರ್ಭದಲ್ಲಿ, ಯುವಕನು ವಿದ್ಯಾರ್ಥಿನಿಯರನ್ನು ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡುವ ಉದ್ದೇಶವನ್ನೂ ಹೊಂದಿದ್ದನೆಂದು ಕೆಲವರು ಆರೋಪಿಸುತ್ತಿದ್ದಾರೆ. ಯುವಕನಲ್ಲಿ ಚಿತ್ರೀಕರಿಸಿದ ಬೇರೆ ಚಿತ್ರಗಳು ಇವೆಯೆನ್ನುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಪೊಲೀಸರು ಈತನ ಮೇಲೆ ದುರ್ಬಲ ಪ್ರಕರಣ ದಾಖಲಿಸಿ ಮರು ದಿನವೇ ಜಾಮೀನು ಸಿಗುವ ವ್ಯವಸ್ಥೆಯನ್ನು ಮಾಡಿದ್ದಾರೆ. ಈತ ಜೈಲಿನಿಂದ ಹೊರ ಬಂದ ಬಳಿಕ ಫೋಟೊಗಳನ್ನು ದುರ್ಬಳಕೆ ಮಾಡುವ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಯುವಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಂತೆ ದಕ್ಷಿಣಕನ್ನಡ ಜಿಲ್ಲೆಯ ಪ್ರಭಾವೀ ರಾಜಕಾರಣಿಗಳ ಒತ್ತಡವಿದ್ದು, ವಿಶ್ವವಿದ್ಯಾನಿಲಯದ ಕುಲಸಚಿವರು ಹಾಗೂ ಪೊಲೀಸ್ ಸಿಬ್ಬಂದಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದರೆ ವಿಶ್ವವಿದ್ಯಾನಿಲಯದ ಮುಂದೆ ಪ್ರತಿಭಟನೆ ನಡೆಸುವುದು ನಮಗೆ ಅನಿವಾರ್ಯ ಎಂದು ಪೋಷಕರು ಎಚ್ಚರಿಸಿದ್ದಾರೆ. ತಮ್ಮ ಮಕ್ಕಳಿಗೆ ಬಂದ ಸ್ಥಿತಿ, ಪೊಲೀಸ್ ಅಧಿಕಾರಿಗಳ ಅಥವಾ ರಾಜಕಾರಣಿಗಳ ಹೆಣ್ಣು ಮಕ್ಕಳಿಗೆ ಬಂದಿದ್ದರೆ ಅವರು ಸುಮ್ಮನಿರುತ್ತಿದ್ದರೇ? ಎಂದೂ ಪೋಷಕರು ಪ್ರಶ್ನಿಸುತ್ತಿದ್ದಾರೆ. ಆರೋಪಿ ಸುಲಭದಲ್ಲಿ ಜಾಮೀನು ಪಡೆದು ಬರುವಂತಾಗಿರುವುದು ಇನ್ನಷ್ಟು ಇಂತಹ ಪ್ರಕರಣಗಳು ನಡೆಯಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.