×
Ad

ನಕಲಿ ಗೋರಕ್ಷಕರ ದಬ್ಬಾಳಿಕೆ ವಿರುದ್ಧ ಅ.4ರಿಂದ ‘ಉಡುಪಿ ಚಲೋ’

Update: 2016-09-16 20:04 IST

ಬೆಂಗಳೂರು, ಸೆ.16: ನಕಲಿ ಗೋರಕ್ಷಕರಿಂದ ಅಮಾಯಕರ ಮೇಲೆ ಹೆಚ್ಚುತ್ತಿರುವ ಹಲ್ಲೆಗಳನ್ನು ಖಂಡಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ಅ.4ರಿಂದ 9ರವರೆಗೆ ‘ಉಡುಪಿ ಚಲೋ’ ಸ್ವಾಭಿಮಾನಿ ಸಂಘರ್ಷ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇತ್ತೀಚೆಗೆ ಗುಜರಾತ್‌ನಲ್ಲಿ ದನದ ಚರ್ಮ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು, ದಲಿತ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ಗುಜರಾತ್‌ನ ಉನಾದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅದೇ ಮಾದರಿಯಲ್ಲಿ ‘ಉಡುಪಿ ಚಲೋ’ ಸ್ವಾಭಿಮಾನಿ ಸಂಘರ್ಷ ಜಾಥಾ ನಡೆಯಲಿದೆ ಎಂದು ಹೋರಾಟಗಾರ ಹರ್ಷಕುಮಾರ ಕುಗ್ವೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನಕಲಿ ಗೋರಕ್ಷಕರಿಂದ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆಗಳು ಹಾಗೂ ಹತ್ಯೆಗಳು ನಡೆಯುತ್ತಿವೆ. ಮುಖ್ಯವಾಗಿ ದಲಿತ, ಮುಸ್ಲಿಮ್ ಹಾಗೂ ಮಹಿಳೆಯರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ನಿರಂತರವಾಗಿ ಶೋಷಿಸಲಾಗುತ್ತಿದೆ. ಇವೆಲ್ಲವುಗಳನ್ನು ಖಂಡಿಸಿ ‘ಉಡುಪಿ ಜಾಥ’ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಯುವಕರ ನೇತೃತ್ವ

‘ಉಡುಪಿ ಚಲೋ’ ಸ್ವಾಭಿಮಾನಿ ಸಂಘರ್ಷ ಜಾಥಾಕ್ಕೆ ದಲಿತ ಸಮುದಾಯದ ಯುವಕರು ನೇತೃತ್ವ ವಹಿಸಿಕೊಂಡಿದ್ದಾರೆ. ಬಿವಿಎಸ್ ಮುಖಂಡ ಹರಿರಾಮ್, ಯುವಲೇಖಕ ವಿಕಾಸ್ ಆರ್.ವೌರ್ಯ, ಹುಲಿಕುಂಟೆ ಮೂರ್ತಿ, ಯುವ ಹೋರಾಟಗಾರ ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವರು ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು.

ಜಾಥಾ ವೇಳಾಪಟ್ಟಿ

ಅ.4ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ‘ಉಡುಪಿ ಜಾಥಾ’ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ನಾಡಿನ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.

ಅ.4ರ ಸಂಜೆ ನೆಲಮಂಗಲದಲ್ಲಿ ಬಹಿರಂಗ ಸಭೆ ಮತ್ತು ನಾಟಕ ಪ್ರದರ್ಶನ.

ಅ.5ರಂದು ಕುಣಿಗಲ್ ಹಾಗೂ ಚನ್ನರಾಯಪಟ್ಟಣ.

ಅ.6 ಹೊಳೆನರಸೀಪುರ ಹಾಗೂ ಹಾಸನ.

ಅ.7ರಂದು ಬೇಲೂರು ಹಾಗೂ ಚಿಕ್ಕಮಗಳೂರು.

ಅ.8ರಂದು ಬೆಳಗ್ಗೆ ಕೊಪ್ಪದಲ್ಲಿ ಬೃಹತ್ ಬಹಿರಂಗ ಸಭೆ.

ಸೆ.9ರಂದು ಉಡುಪಿಯಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor