ಕ್ರೀಡಾಕೂಟಗಳಿಗೆ ಸರಕಾರ ಅನುದಾನ ಕಲ್ಪಿಸಲಿ: ಶಾಸಕ ಮಧು ಬಂಗಾರಪ್ಪ
ಸೊರಬ, ಸೆ.16: ಶಾಲಾ ಮಕ್ಕಳ ಕ್ರೀಡೆಗಳಿಗೆ ಸರಕಾರ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಸಮರ್ಪಕ ಅನುದಾನ ಕಲ್ಪಿಸಿಕೊಡಬೇಕೆಂದು ಶಾಸಕ ಮಧು ಬಂಗಾರಪ್ಪಹೇಳಿದರು.
ಪಟ್ಟಣದ ಎಸ್.ಬಂಗಾರಪ್ಪಕ್ರೀಡಾಂಗಣದಲ್ಲಿ ನಡೆದ 14ವರ್ಷದೊಳಗಿನ ಬಾಲಕ-ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ವಿವಿಧ ಕ್ಷೇತ್ರಗಳಿಗೆ ಹಲವು ಭಾಗ್ಯಗಳನ್ನು ಕಲ್ಪಿಸಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭೆೆಗಳಿದ್ದು, ಅಂತಹ ಪ್ರತಿಭೆೆಗಳಿಗೆ ಉತ್ತೇಜನ ನೀಡಲು ಸರಕಾರದ ವತಿಯಿಂದ ಪಠ್ಯೇತರ ಚಟುವಟಿಕೆಗಳಲ್ಲೊಂದಾದ ಕ್ರೀಡೆಗಳಿಗೂ ಹೆಚ್ಚಿನ ಅನುದಾನ ನೀಡುವುದರ ಮೂಲಕ ಪ್ರೋತ್ಸಾಹ ನೀಡಬೇಕಾಗಿದೆ. ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಹೋಲಿಸಿದರೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಕ್ರೀಡಾಪಟುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಕ್ರೀಡಾ ಕೂಟವನ್ನು ನಡೆಸಲು ಆಯಾ ಶಾಲೆಗಳಿಗೆ ವಹಿಸಿಕೊಟ್ಟರೆ ಸಾಲದು, ಸರಕಾರದ ವತಿಯಿಂದಲೇ ಕ್ರೀಡಾ ಕೂಟಗಳಿಗೆ ತಗಲುವ ಸಂಪೂರ್ಣ ಖರ್ಚು-ವೆಚ್ಚವನ್ನು ಸರ್ಮಪಕವಾಗಿ ಬಿಡುಗಡೆಗೊಳಿಸಿ ಶಿಕ್ಷಕರು, ಪೋಷಕರು ಹಾಗೂ ಆಡಳಿತ ಮಂಡಳಿಗಳ ಮೇಲೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶ್ ಕೊಟಗಿ, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ್ ಹೆಗಡೆ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ಸುನೀಲ್ ಗೌಡ, ನಾಗರಾಜ್, ಪಪಂ ಸದಸ್ಯ ಡಿ.ಆರ್. ಶ್ರೀಧರ್, ಪ್ರಭಾರ ಬಿ.ಇ.ಒ.ಆಂಜನೇಯ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹೇಶ್ವರಪ್ಪ, ಪ್ರಮುಖರಾದ ಎಚ್. ಗಣಪತಿ, ವಿಕ್ಟರ್ ಪಾಯ್ಸಾ, ಸೈಯದ್ ಅತೀಕ್, ಕಿರಣ್, ಕೆ.ಸಿ.ಶಿವಕುಮಾರ್, ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.