×
Ad

ಶಿವಮೊಗ್ಗ ಜಿಲ್ಲಾಡಳಿತ ರಾಜ್ಯಕ್ಕೆ ಪ್ರಥಮ

Update: 2016-09-16 22:08 IST

ಬಿ.ರೇಣುಕೇಶ್

ಶಿವಮೊಗ್ಗ, ಸೆ. 16: ಕಾಲಮಿತಿಯಲ್ಲಿ ನಾಗರಿಕರಿಗೆ ಸರಕಾರದ ವಿವಿಧ ಇಲಾಖೆಗಳ ಸೇವೆ ಲಭ್ಯವಾಗುವ ಉದ್ದೇಶದಿಂದ ರಾಜ್ಯ ಸರಕಾರ ಜಾರಿಗೊಳಿಸಿರುವ ‘ಸಕಾಲ’ ಯೋಜನೆಯ ಕಂದಾಯ ವಿಭಾಗದ ಸೇವೆಯ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನಗಳಿಸಿ ಎಲ್ಲರ ಗಮನ ಸೆಳೆದಿದೆ. ಇತ್ತೀಚೆಗೆ ರಾಜ್ಯ ಸರಕಾರ ‘ಸಕಾಲ’ದ ಜಿಲ್ಲಾವಾರು ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯು ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶಿವಮೊಗ್ಗ ಜಿಲ್ಲಾಡಳಿತದ ಈ ಸಾಧನೆಗೆ ರಾಜ್ಯಸರಕಾರದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸುವಂತೆ ಮಾಡಿದೆ. ‘ಸಕಾಲ’, ‘ಭೂಮಿ’ ಹಾಗೂ ‘ಅಟಲ್ ಜನಸ್ನೇಹಿ ಕೇಂದ್ರ’ಗಳ ಮೂಲಕ ಆಗುವ ಕಡತಗಳ ವಿಲೇವಾರಿಯ ಆಧಾರದ ಮೇಲೆ ರಾಜ್ಯ ಸರಕಾರವು ಜಿಲ್ಲಾವಾರು ಸಾಧನೆಯ ರ್ಯಾಂಕಿಂಗ್ ಪಟ್ಟಿ ಪ್ರಕಟಿಸುತ್ತದೆ. ಈ ಮೂಲಕ ಜಿಲ್ಲಾಡಳಿತಗಳ ಸಾಧನೆಯ ಪರಾಮರ್ಶೆ ನಡೆಸುತ್ತದೆ. ರ್ಯಾಂಕಿಂಗ್‌ನಲ್ಲಿ ಹಿಂದಿರುವ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತದೆ. ಯುವ ಅಧಿಕಾರಿಯ ಶ್ರಮ: ಆದರೆ ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಯುವ ಅಧಿಕಾರಿ ಕೆ.ಚೆನ್ನಬಸಪ್ಪರವರ ಪ್ರಾಮಾಣಿಕ ಕಾರ್ಯವೈಖರಿಯಿಂದ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಕಂಡುಬಂದಿದೆ ಎಂದು ಸ್ವತಃ ಕೆಲ ಹಿರಿಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆ ಸ್ಥಾನ ಪಡೆಯಲು ಕೆ.ಚನ್ನಬಸಪ್ಪರವರ ಅವಿರತ ಶ್ರಮ ಕಾರಣವಾಗಿದೆ ಎನ್ನಲಾಗುತ್ತಿದೆ. ಹಾಗೆಯೇ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಈ ಮೂರು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ತೋರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರಗಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಶಿವಮೊಗ್ಗ ಜಿಲ್ಲೆಯು ಪ್ರಸ್ತುತ ರಾಜ್ಯದ ಗಮನ ಸೆಳೆಯುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಕಂದಾಯ ವಿಭಾಗದ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ. ನಿರ್ದಾಕ್ಷಿಣ್ಯ ಕ್ರಮ

: ಕಡತ ವಿಲೇವಾರಿ ಹಾಗೂ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷ ತೋರುವ ತಾಲೂಕು ಆಡಳಿತ ಹಾಗೂ ಇಲಾಖೆಗಳ ಅಧಿಕಾರಿಗಳ ವಿರುದ್ಧ್ದ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪರವರು ನಿರ್ದಾಕ್ಷಿಣ್ಯ ಕ್ರಮ ಜರಗಿಸುತ್ತಿದ್ದಾರೆ. ಈ ವಿಷಯದಲ್ಲಿ ಅವರು ಯಾವುದೇ ಒತ್ತಡಕ್ಕೂ ಮಣಿಯುತ್ತಿಲ್ಲವಾಗಿದೆ. ಇದರಿಂದ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖಾಧಿಕಾರಿಗಳು ‘ಸಕಾಲ’, ‘ಭೂಮಿ’ ಹಾಗೂ ‘ಅಟಲ್ ಜನಸ್ನೇಹಿ ಕೇಂದ್ರ’ಗಳಡಿ ನಾಗರಿಕರಿಗೆ ಕಾಲಮಿತಿಯಲ್ಲಿ ಸೇವೆ ಕಲ್ಪಿಸುತ್ತಿದ್ದಾರೆ. ಬೆಳಗ್ಗೆ ಕಚೇರಿಗೆ ಆಗಮಿಸಿದರೆ ಕೆಲವೊಮ್ಮೆ ರಾತ್ರಿ 10 ಗಂಟೆಯವರೆಗೂ ಕಚೇರಿಯಲ್ಲಿದ್ದು ತಮ್ಮ ಕೆಲಸ ಪೂರ್ಣಗೊಳಿಸಿ ಹೋಗುತ್ತಾರೆ. ಕೆ.ಚನ್ನಬಸಪ್ಪರವರಲ್ಲಿರುವ ಬದ್ಧತೆಯ ಕಾರಣದಿಂದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಬರುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ತಾಲೂಕು ಆಡಳಿತದ ಹಿರಿಯ ಅಧಿಕಾರಿಯೋರ್ವರು ಅಭಿಪ್ರಾಯಪಟ್ಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News