ಎನ್ನೆಸ್ಸೆಸ್‌ನಿಂದ .ಗ್ರಾಮೀಣ ಬದುಕಿನ ಅರಿವು: ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ
ಸಾಗರ, ಸೆ.16: ಎನ್ನೆಸ್ಸೆಸ್‌ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಲು ಹೆಚ್ಚಿನ ಅವಕಾಶವಿದ್ದು, ಪ್ರತಿಯೊಬ್ಬರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಪಾಲ್ಗೊಳ್ಳುವತ್ತ ಗಮನಹರಿಸಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭವಿಷ್ಯ ರೂಪಿಸಲು ಅಂಕವೊಂದೇ ಮಾನದಂಡವಾಗಬಾರದು. ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆವ್ಯಕ್ತಿತ್ವ ರೂಪಿಸುವ ಎನ್ನೆಸ್ಸೆಸ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮನೋಭೂಮಿಕೆ ಸಿದ್ಧಪಡಿಸಿಕೊಳ್ಳಬೇಕು.ಗ್ರಾಮೀಣ ಬದುಕಿನ ಅರಿವು ಇಂತಹ ಚಟುವಟಿಕೆಗಳ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಹಿಂದೆ ಉದ್ಯೋಗಾವಕಾಶ ಕಡಿಮೆ ಇತ್ತು. ಜಾಗತೀಕರಣದ ನಂತರದ ದಿನಗಳಲ್ಲಿ ವಿಪುಲವಾದ ಉದ್ಯೋಗಾವಕಾಶ ನಮ್ಮ ಎದುರು ತೆರೆದುಕೊಂಡಿದೆ. ವಿದ್ಯಾರ್ಥಿ ಸಮೂಹ ಉತ್ತಮ ಫಲಿತಾಂಶ ಪಡೆಯುವ ಜೊತೆಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆ ಉತ್ತಮ ಉದ್ಯೋಗ ಪಡೆಯಬಹುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಉಷಾ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಅಭಿವೃದ್ಧಿಗೆ ಸಚಿವ ಕಾಗೋಡು ತಿಮ್ಮಪ್ಪಅವರು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶದತ್ತ ಗಮನ ಹರಿಸಬೇಕು. ಕಾಲೇಜಿನ ಅಭಿವೃದ್ಧಿಗೆ ಬೇಕಾದ ಎಲ್ಲ ಸಹಾಯವನ್ನು ನಗರಸಭೆ ನೀಡುತ್ತದೆ ಎಂದರು. ಪ್ರಾಚಾರ್ಯ ಕೆ.ಚಿದಂಬರ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಗಂಗಾಧರಪ್ಪ, ಎನ್ನೆಸ್ಸೆಸ್ ಅಧಿಕಾರಿ ಬಸವರಾಜ್, ಹಿರಿಯ ಉಪನ್ಯಾಸಕ ಮಂಜಪ್ಪಉಪಸ್ಥಿತರಿದ್ದರು.