ಸಮಾನತೆಯ ಸಮಾಜ ರೂಪಿಸಲು ದಾರ್ಶನಿಕರ ಚಿಂತನೆ ಅಗತ್ಯ: ಶಾಸಕ ಮಧು ಬಂಗಾರಪ್ಪ
ಸೊರಬ, ಸೆ.16: ದಾರ್ಶನಿಕರ ಉದ್ದೇಶ ಸಮಾಜವನ್ನು ಸಮಾನತೆಯ ಆಶಯದಲ್ಲಿ ಕಟ್ಟುವ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಅವರು ಪ್ರತಿಪಾದಿಸಿದ ವಿಚಾರಧಾರೆಗಳನ್ನು ಉತ್ತಮ ಭವಿಷ್ಯ ರೂಪಿಸಲು ಬಳಸಿಕೊಳ್ಳಬೇಕು ಎಂದು ಶಾಸಕ ಮಧು ಬಂಗಾರಪ್ಪಕರೆ ನೀಡಿದರು.
ಶುಕ್ರವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ತಾಲೂಕು ಆಡಳಿತ ಮತ್ತು ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾರಾಯಣ ಗುರುಗಳ 162ನೆ ಜಯಂತ್ಯೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ರಾಜ್‌ಕುಮಾರ್ ಹಾಗೂ ಎಸ್. ಬಂಗಾರಪ್ಪದೀವರ ಸಮಾಜದ ಎರಡು ಕಣ್ಣುಗಳಿದ್ದಂತೆ. ರಾಜ್ಯದಲ್ಲಿ ಇಬ್ಬರು ಮೇರು ವ್ಯಕ್ತಿಗಳಾಗಿ ಬೆಳೆಯಲು ದೀವರು ಜನಾಂಗದ ಶ್ರಮ ಸಾಕಷ್ಟಿದೆ ಎಂದ ಅವರು, ದೀವರ ಜನಾಂಗ ದೇಶದಾದ್ಯಂತ 19 ಕೋಟಿಗೂ ಅಧಿಕ ಸಂಖ್ಯೆಯಲ್ಲಿದೆ. ದೀವರು ಸಂಘಟಿತ ಮನೋಭಾವ ಹೊಂದಿ ಸಮಾಜದ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮುಂದಾಗಬೇಕೆಂದರು.
ಸರಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ್ ಮಾತನಾಡಿ, ತಳ ಸಮುದಾಯದ ಶೋಷಣೆಗಳ ಮಧ್ಯೆ ವೈಚಾರಿಕ ಕ್ರಾಂತಿಯ ಬೀಜವಾಗಿ ನಾರಾಯಣಗುರು ಹುಟ್ಟಿ ಬಂದಿರುವುದು ತಡವಾದರೂ ಪ್ರಗತಿಪರ ಸಮಾಜ ಕಾಣಲು ಸಾಧ್ಯವಾಯಿತು. ಸಮಾಜದ ಉನ್ನತಿಗೆ ದುಡಿಯುವ ಶ್ರಮಿಕ ವರ್ಗವನ್ನು ಅತ್ಯಂತ ಕೀಳಾಗಿ ಕಾಣುವಕೆಲವು ಮೂಲಭೂತ ಮನಸ್ಸುಗಳು ಕೆಳ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಅಡೆ-ತಡೆ ಉಂಟು ಮಾಡಿದ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ದೊಡ್ಡಮಾನವ ತಾವಾದಿ ನಾರಾಯಣ ಗುರು ಎಂದು ಬಣ್ಣಿಸಿದರು.
ಈ ಸಂದರ್ಭ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ, ಜಿಲ್ಲಾ ಪಂಚಾಯತ್ ಸದಸ್ಯರಾದ ತಾರಾ ಶಿವಾನಂದಪ್ಪ, ರಾಜೇಶ್ವರಿ ಗಣಪತಿ, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ್ ಹೆಗಡೆ, ಉಪಾಧ್ಯಕ್ಷಸುರೇಶ್, ಸದಸ್ಯರಾದ ಇಂದಿರಾ, ಮಂಜಮ್ಮ, ನಾಗರಾಜ್ ಚಿಕ್ಕಸವಿ, ಸುನೀಲ್‌ಗೌಡ, ಕೆ.ಜಿ. ನಾಗರಾಜ್, ಪಪಂ ಸದಸ್ಯರಾದ ಎಂ.ಡಿ. ಉಮೇಶ್,ಮಂಚಿ ಹನುಮಂತಪ್ಪ, ಡಿ.ಆರ್. ಶ್ರೀಧರ್, ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ರತ್ನಾ, ಸುಮಿತ್ರಾ ಪ್ರಾರ್ಥಿಸಿ, ಪುಟ್ಟಸ್ವಾಮಿ ಸ್ವಾಗತಿಸಿ, ಹೊಳೆಲಿಂಗಪ್ಪ ವಂದಿಸಿ, ಸುಮಿತ್ರಾ ನಾಯ್ಕಾ ಕಾರ್ಯಕ್ರಮ ನಿರೂಪಿಸಿದರು.