ಹಾಸ್ಟೆಲ್‌ನಲ್ಲಿ ಒಣ ತರಕಾರಿ ಬಳಸಿದರೆ ಸೂಕ್ತ ಕ್ರಮ: ಸೋಮಶೇಖರ್
ಚಿಕ್ಕಮಗಳೂರು, ಸೆ.16: ಯಾವುದೇ ಹಾಸ್ಟೆಲ್‌ಗಳಲ್ಲಿ ಅಡುಗೆ ತಯಾರಿಕೆಗೆ ಒಣ ತರಕಾರಿ ಬಳಸಿದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ. ಸೋಮಶೇಖರ್ ಎಚ್ಚರಿಸಿದರು.
ಅವರು ಶುಕ್ರವಾರ ತೇಗೂರಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಬಳಿಕ ಮಾತನಾಡಿದರು.
ಹಾಸ್ಟೆಲ್‌ಗಳಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಯಾವುದೇ ಆಹಾರ ಪದಾರ್ಥ ತಯಾರಿಕೆಗೆ ಉಪಯೋಗಿಸುವ ತರಕಾರಿಗಳನ್ನು ವಾರಗಟ್ಟಲೆ ಮುಂಚೆಯೇ ತಂದು, ಅದು ಒಣ ನಂತರ ಬಳಸಿದರೆ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ದೊರಕುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಕೆಲವು ತರಕಾರಿಗಳು ಉಪಯೋಗಕ್ಕೆ ಯೋಗ್ಯವಾಗಿಲ್ಲ. ಅಂತಹವುಗಳನ್ನು ಎಸೆದು ತಾಜಾ ತರಕಾರಿಗಳನ್ನು ಬಳಸುವಂತೆ ವಾರ್ಡನ್‌ಗೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರಕಾರಗಳು ಪಠ್ಯ-ಪಠ್ಯೇತರ ಸೇರಿದಂತೆ ಊಟದ ವಸತಿಯನ್ನೂ ನೀಡಿ ಸಹಕರಿಸುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಲೋಪ ಬಾರದಂತೆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಸಮಯಕ್ಕೆ ಸರಿಯಾಗಿ ಆಹಾರ ನೀಡಬೇಕು. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಇದೆ. ಆದರೆ ವಿದ್ಯಾರ್ಥಿಗಳು ವಾಸ್ತವ್ಯ ಮಾಡುವ ಕೊಠಡಿ ಸುತ್ತ ಮುತ್ತಲ ಪ್ರದೇಶದಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದಿದ್ದು, ಕೂಡಲೇ ಸರಿಪಡಿಸುವಂತೆ ತಿಳಿಸಿದರು.
ಹಾಸ್ಟೆಲ್ ಅಡುಗೆ ಕೋಣೆ ಹಿಂಭಾಗದಲ್ಲಿ ನೀರು ಶೇಖರಣೆಯಾಗಿರುವುದನ್ನು ಕಂಡ ಸೋಮಶೇಖರ್, ಈ ರೀತಿ ನೀರು ನಿಲ್ಲಿಸಿಕೊಂಡರೆ ಸಾಂಕ್ರಾಮಿಕ ರೋಗವನ್ನು ಆಹ್ವಾನಿಸಿದಂತಾಗುತ್ತದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಚಿಕುನ್ ಗುನ್ಯಾ, ಡೆಂಗ್ ಸೇರಿದಂತೆ ಹಲವು ರೋಗಗಳ ಭೀತಿಯಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆೆ ಸೂಚಿಸಿದರು.
ಹಾಸ್ಟೆಲ್‌ನಲ್ಲಿ 230 ವಿದ್ಯಾರ್ಥಿಗಳಿದ್ದು ಆಹಾರ ಸಾಮಗ್ರಿಗಳು ಸಮರ್ಪಕವಾಗಿ ಸರಕಾರದಿಂದ ಪೂರೈಕೆಯಾಗುತ್ತಿದೆ. ಆದರೆ ಹಾಸ್ಟೆಲ್ ಮುಂಭಾಗದಲ್ಲಿ ಮಾತ್ರ ಕಂಪೌಂಡ್ ಇದ್ದು, ಸುತ್ತಲೂ ಕಾಂಪೌಂಡ್ ಅಗತ್ಯವಿದೆ ಎಂದು ವಾರ್ಡನ್ ಅನಂತ್ ಮಾಹಿತಿ ನೀಡಿದರು. ಹೆಣ್ಣುಮಕ್ಕಳು ಇರುವ ಹಾಸ್ಟೆಲ್‌ಗಳಿಗೆ ಭದ್ರತೆ ದೃಷ್ಟಿಯಿಂದ ಕಂಪೌಂಡ್ ನಿರ್ಮಾಣದ ಅಗತ್ಯವಿದೆ. ಈ ಬಗ್ಗೆ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಹಕರಿಸುವುದಾಗಿ ತಿಳಿಸಿದರು.