ನೌಕಾನೆಲೆ ನಿರಾಶ್ರಿತರಿಗೆ ಶೀಘ್ರ ಪರಿಹಾರ ನೀಡಲು ಆಗ್ರಹ
ಕಾರವಾರ, ಸೆ.17: ಸೀಬರ್ಡ್ ನೌಕಾನೆಲೆಗೆ ಭೂಮಿ ಕಳೆದುಕೊಂಡ ಕಾರವಾರ-ಅಂಕೋಲಾ ತಾಲೂಕಿನ ನಿರಾಶ್ರಿತರಿಗೆ ಹೆಚ್ಚುವರಿ ಭೂಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕ ಸತೀಶ್ ಸೈಲ್ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸ್ಥಾಪಿತವಾಗಿರುವ ಸೀಬರ್ಡ್ ನೌಕಾನೆಲೆಗೆ ಕಾರವಾರ ಹಾಗೂ ಅಂಕೋಲಾ ತಾಲೂಕಿನ ಹಲವಾರು ರೈತರು ತಮ್ಮ ಜಮೀನನ್ನು 3 ದಶಕಗಳ ಹಿಂದೆ ನೀಡಿರುತ್ತಾರೆ. ಎಲ್ಲ ರೈತರು ಅತಿ ಚಿಕ್ಕ ಹಿಡುವಳಿದಾರರಾಗಿದ್ದು, ತಮ್ಮಲ್ಲಿದ್ದ ಕೆಲವೇ ಗುಂಟೆಗಳ ಜಮೀನುಗಳನ್ನು ಸೀಬರ್ಡ್ ನೌಕಾನೆಲೆಗೆ ನೀಡಿದ್ದು ಅಂದಿನ ದಿನ ಸರಕಾರ ನೀಡಿದ ಅತ್ಯಲ್ಪಪರಿಹಾರ ಪಡೆದು ದುಸ್ತರ ಜೀವನವನ್ನು ಸಾಗಿಸುತ್ತಿದ್ದಾರೆ.
ಕಾನೂನಾತ್ಮಕವಾಗಿರುವ ಈ ರೈತರ ಹಕ್ಕಿನನ್ವಯ ಹೆಚ್ಚಿನ ಭೂ ಪರಿಹಾರ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮೂರು ದಶಕಗಳು ಕಳೆದರೂ ಕೂಡ ಹೆಚ್ಚಿನ ಭೂ ಪರಿಹಾರವು ಈ ರೈತರಿಗೆ ಮರೀಚಿಕೆಯಂತಾಗಿರುತ್ತದೆ. ಕರ್ನಾಟಕ ಸರಕಾರ ಈ ಎಲ್ಲ ರೈತರಿಂದ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡು ಕೇಂದ್ರ ರಕ್ಷಣಾ ಇಲಾಖೆಗೆ ಹಸ್ತಾಂತರಿಸಿರುತ್ತದೆ. ರಕ್ಷಣಾ ಇಲಾಖೆಯು ಈಗಾಗಲೇ ನೌಕಾನೆಲೆಯನ್ನು ಸ್ಥಾಪಿಸಿದ್ದು ಈ ಎಲ್ಲ ಜಮೀನುಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ರಕ್ಷಣಾ ಇಲಾಖೆಯು ಇಲ್ಲಿಯವರೆಗೂ ಭೂ ಮಾಲಕರಿಗೆ ಹೆಚ್ಚಿನ ಭೂ ಪರಿಹಾರವನ್ನು ನೀಡಿರುವುದಿಲ್ಲ. ಕಾರವಾರ ಸಿವಿಲ್ ನ್ಯಾಯಾಲಯಗಳು ಭೂ ಸ್ವಾಧೀನ ಕಾಯ್ದೆ ಸೆಕ್ಷನ್ 18(1) ರಡಿ ಹೆಚ್ಚಿನ ಭೂ ಪರಿಹಾರವನ್ನು ನಿಗದಿಮಾಡಿ ಆದೇಶಿಸಿದಾಗ, ರಕ್ಷಣಾ ಇಲಾಖೆಯವರು ವಿವಿಧ ನ್ಯಾಯಾಲಯಗಳಲ್ಲಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ವಿಫಲವಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದ 304 ಪ್ರಕರಣಗಳಲ್ಲಿಯೂ ಕೂಡ ಕಾರವಾರ ನೌಕಾನೆಲೆ ಯೋಜನೆಗೆ ಸ್ವಾಧೀನಗೊಂಡ ಭೂಮಿಗೆ ನಿರ್ಧರಿಸಲಾದ ಪ್ರತಿ ಗುಂಟೆಗೆ 11,500 ರೂ. ದೃಢೀಕರಿಸಿ ಆದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಾರವಾರ ಮತ್ತು ಅಂಕೋಲಾ ತಾಲೂಕುಗಳಲ್ಲಿ ನೌಕಾನೆಲೆ ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡ ಎಲ್ಲ ಜಮೀನುಗಳಿಗೂ ಈ ಆದೇಶವು ಅನ್ವಯವಾಗುತ್ತದೆಂಬುದು ಸ್ವಷ್ಟವಾಗುತ್ತದೆ. ಆದರೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಈ ಬಡ ರೈತರಿಗೆ ಹೆಚ್ಚಿನ ಭೂಪರಿಹಾರವನ್ನು ನೀಡದೆ ವಿವಿಧ ನ್ಯಾಯಾಲಯಗಳಲ್ಲಿ ಅನವಶ್ಯಕವಾಗಿ ಮೇಲ್ಮನವಿಗಳನ್ನು ಸಲ್ಲಿಸುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಒಂದು ಯೋಜನೆಗೆ ಒಂದೇ ತೆರನಾದ ಜಮೀನುಗಳನ್ನು ಒಂದೇ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವುದರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿ ಗುಂಟೆಗೆ 11,500 ರೂ. ನಿಗದಿಪಡಿಸಿದಾಗ ಇದೇ ಯೋಜನೆಗೆ ಇದೇ ತೆರನಾದ ಜಮೀನುಗಳಿಗೆ ಸಂಬಂಧಪಟ್ಟಂತೆ ಬೆಲೆ ನಿಗದಿಪಡಿಸಿದಾಗ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಕ್ಷಣಾ ಇಲಾಖೆಯ ಕಾಲಹರಣ ವರ್ತನೆಯಿಂದ ಕೇಂದ್ರ ಸರಕಾರಕ್ಕೆ ಶೇ.15 ರಷ್ಟು ಹೆಚ್ಚು ಬಡ್ಡಿ ಹಣ ಪ್ರತಿದಿನ ಹೊರೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಭೂಸ್ವಾಧೀನ ಕಾಯ್ದೆ ಕಲಂ 1894 ಸೆಕ್ಷನ್ 28(ಅ) ರಡಿ ದಾಖಲಾದ 430ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಹೆಚ್ಚಿನ ಭೂ ಪರಿಹಾರವನ್ನು ನಿಗದಿ ಮಾಡಿ ಆದೇಶಿಸಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಹೆಚ್ಚುವರಿ ಭೂ ಪರಿಹಾರವನ್ನು ಸಂದಾಯ ಮಾಡಲು ರಕ್ಷಣಾ ಇಲಾಖೆಯ ಪ್ರತಿನಿಧಿಯಾಗಿರುವ ಬೆಂಗಳೂರಿನ ಡಿಫೆೆನ್ಸ್ ಎಸ್ಟೇಟ್ಸ್ ಆಫೀಸರ್ ಅವರಿಗೆ ದಾಖಲೆಗಳೊಂದಿಗೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಕ್ಷಣಾ ಇಲಾಖೆಯ ಪ್ರತಿನಿಧಿಗಳಾದ ಡಿಫೆೆನ್ಸ್ ಎಸ್ಟೇಟ್ಸ್ ಆಫೀಸರ್ ಹಾಗೂ ಪುಣೆಯ ಪ್ರಿನ್ಸಿಪಲ್ ಡೈರೆಕ್ಟರ್, ಡಿಫೆನ್ಸ್ ಎಸ್ಟೇಟ್ಸ್ ಇವರಿಗೆ ಹೆಚ್ಚುವರಿ ಭೂ ಪರಿಹಾರಕ್ಕೆ ಆದೇಶಿಸಿದ ನ್ಯಾಯಾಲಯದ ಅಥವಾ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸದೇ ನಿಗದಿತ ಹಣವನ್ನು ಕೂಡಲೇ ವಿಶೇಷ ಭೂ ಸ್ವಾಧೀನಾಧಿಕಾರಿ, ಕಾರವಾರದ ನೌಕಾನೆಲೆಗೆ ಜಮಾ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಶಾಸಕ ಸತೀಶ್ ಸೈಲ್ ಕೋರಿದ್ದಾರೆ.