×
Ad

ಖಂಡಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ

Update: 2016-09-17 22:24 IST

ಸಾಗರ, ಸೆ.17: ತಾಲೂಕಿನ ತ್ಯಾಗರ್ತಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ನಿರಂತರ ಗೈರು ಹಾಜರಾಗುತ್ತಿರುವುದನ್ನು ಖಂಡಿಸಿ, ಅವರನ್ನು ಬೇರೆ ಕಡೆ ವರ್ಗಾಯಿಸಿ, ಹೊಸ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಪೋಷಕರು ಶನಿವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ತ್ಯಾಗರ್ತಿ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 52 ವಿದ್ಯಾರ್ಥಿಗಳಿದ್ದರೂ, ಇಲ್ಲಿ ಉರ್ದು ವಿಷಯ ಬೋಧಿಸುವ ಜೊತೆಗೆ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಹೀನಾ ಎಂ. ಮುಖಂದರ್ ನಿರಂತರವಾಗಿ ಗೈರು ಹಾಜರಾಗುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸಾಗರ ಪಟ್ಟಣದ ಉರ್ದು ಶಾಲೆಗೆ ಕಳುಹಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾನಿರತರು ದೂರಿದರು. ಕಳೆದ ಐದು ವರ್ಷಗಳಲ್ಲಿ ಮುಖ್ಯ ಶಿಕ್ಷಕಿ ಶಾಹೀನಾ ಎಂ. ಮುಖಂದರ್ 135 ದಿನ ಮಾತ್ರ ಕರ್ತವ್ಯ ನಿರ್ವಹಿಸಿದ್ದಾರೆ. ಒಂದಿಲ್ಲೊಂದು ಕಾರಣ ಹೇಳಿ ಶಾಲೆಗೆ ಗೈರು ಹಾಜರಾಗುತ್ತಿರುವುದರಿಂದ ಮಕ್ಕಳಿಗೆ ಸರಿಯಾಗಿ ಪಾಠಗಳು ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ 14ಕ್ಕೆ ಇಳಿದಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಾಲೆ ಮುಚ್ಚುವ ಭೀತಿ ಎದುರಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಶಿಕ್ಷಕಿ ಗೈರಿನಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನನುಕೂಲದ ಬಗ್ಗೆ ಅನೇಕ ಬಾರಿ ಶಾಲಾಭಿವೃದ್ಧಿ ಸಮಿತಿಯಿಂದ ಚುನಾಯಿತ ಪ್ರತಿನಿಧಿಗಳಿಗೆ, ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾರೂ ಇದರ ಬಗ್ಗೆ ಆಸಕ್ತಿ ವಹಿಸದೆ ಇರುವುದು ಖಂಡನೀಯ ಎಂದರು. ನಿರಂತರ ಗೈರುಹಾಜರಾಗುತ್ತಿರುವ ಶಿಕ್ಷಕಿಯನ್ನು ಬೇರೆಡೆ ವರ್ಗಾವಣೆ ಮಾಡಿ, ಹೊಸ ಶಿಕ್ಷಕರನ್ನು ನೇಮಕ ಮಾಡಬೇಕು. ಇಲ್ಲವಾದರೆ ಶಾಲೆಯ ಬೀಗ ತೆರೆಯುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಶಿಕ್ಷಕರನ್ನು ನಿಯೋಜನೆ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು. ಶಿಕ್ಷಕರ ನೇಮಕ ಭರವಸೆ: ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಪೋಷಕರ ಅಹವಾಲು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಮುಖ್ಯಶಿಕ್ಷಕಿ ಶಾಹೀನಾ ಎಂ. ಮುಖಂದರ್ ಗೈರಿನ ಸಂಬಂಧ ಅವರಿಗೆ ನೋಟಿಸ್ ನೀಡಲಾಗಿದೆ. ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಹೊಸ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಅಲ್ಲಿಯವರೆಗೆ ಉರ್ದು ವಿಷಯ ಬೋಧಿಸಲು ಬೇರೆ ಶಾಲೆಗಳಿಂದ ಶಿಕ್ಷಕರೊಬ್ಬರನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಮೀರ್‌ಖಾನ್, ಪ್ರಮುಖರಾದ ಆರಿಫ್, ಜಾವೀದ್, ತನ್ವೀರ್, ಅಝೀಝ್, ಮುಬೀನಾ, ನರ್ಸಿಯಾ, ಶಂಷಾದ್, ಶಕೀಲಾ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News