×
Ad

ಮಡಿಕೇರಿ: ಅ.17ರಂದು ಕಾವೇರಿ ತೀರ್ಥೋದ್ಭವ

Update: 2016-09-17 22:25 IST

ಮಡಿಕೇರಿ, ಸೆ.17: ಜೀವನದಿ ಕಾವೇರಿ ಉಗಮ ಸ್ಥಳವಾದ ತಲಕಾವೇರಿಯ ತೀರ್ಥ ಕುಂಡಿಕೆಯಲ್ಲಿ ಅ.17ರಂದು ಬೆಳಗ್ಗಿನ ಜಾವ 6 ಗಂಟೆ 29 ನಿಮಿಷಕ್ಕೆ ತೀರ್ಥೋದ್ಭವ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಪ್ರಕಟಿಸಿದ್ದಾರೆ.

   

ಕಾವೇರಿ ತುಲಾ ಸಂಕ್ರಮಣ ಜಾತ್ರೆಯನ್ನು ಭಕ್ತಿಪೂರ್ವಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದರು. ನಗರದ ನೂತನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಕಾವೇರಿ ತುಲಾ ಸಂಕ್ರಮಣ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಬೆಳಗ್ಗೆ ತೀರ್ಥೋದ್ಬವವಾಗುವುದರಿಂದ ಅಗತ್ಯ ಸೂಕ್ತ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು, ಸಾರಿಗೆ ಸಂಪರ್ಕ ಹಾಗೂ ವಾಹನ ನಿಲುಗಡೆ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲು ತ್ವರಿತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಮತ್ತು ಶಾಸಕರು ನಿರ್ದೇಶನ ನೀಡಿದರು. ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ನಾಡಿನ ಜೀವನದಿ ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೆ ಜರಗುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು. ದೇವಸ್ಥಾನದಲ್ಲಿ ಶೌಚಾಲಯ ನಿರ್ಮಾಣ ಸಂಬಂಧ ಕಳೆದ ವರ್ಷ ಪ್ರಸ್ತಾವನೆ ಇಟ್ಟಿದ್ದರೂ ಇದುವರೆಗೂ ಶೌಚಾಲಯ ನಿರ್ಮಾಣವಾಗಿಲ.್ಲ ಜಿಲ್ಲಾಡಳಿತ ಹಾಗೂ ದೇವಸ್ಥಾನ ಸಮಿತಿ ಹಾಗೂ ಸ್ಥಳೀಯ ಗ್ರಾಪಂಗಳ ಮುಖಂಡರ ಜೊತೆ ಚರ್ಚಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆಗಬೇಕು ಎಂದರು.

  

  ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ತುಲಾ ಸಂಕ್ರಮಣ ಜಾತ್ರೆ ಸಂಬಂಧ ಹಲವು ಮಾಹಿತಿ ನೀಡಿದರು. ದೇವಾಲಯದ ಮುಖ್ಯಸ್ಥರಾದ ನಾರಾಯಣಾಚಾರ್, ಕೋಡಿ ಚಂದ್ರಶೇಖರ್, ರವೀಂದ್ರ ಹೆಬ್ಬಾರ್, ಕೋಡಿ ಮೋಟಯ್ಯ, ಎಂ.ಬಿ.ದೇವಯ್ಯ ಮತ್ತಿತರರು ತಲಕಾವೇರಿ ಜಾತ್ರೆ ಸಂಬಂಧ ಹಲವು ಸಲಹೆ ಹಾಗೂ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News