ಕಾರ್ಮಿಕರಿಗೆ ಸೌಲಭ್ಯ ನೀಡದಿದ್ದಲ್ಲಿ ಕಾನೂನು ಹೋರಾಟ
ಮಡಿಕೇರಿ, ಸೆ.17: ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸ ಲಾಗುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ನೂತನ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜಾ, ಕಾರ್ಮಿಕ ಕಾಯ್ದೆ ಪ್ರಕಾರ ತೋಟ ಕಾರ್ಮಿಕರಿಗೆ ಎಲ್ಲ ಸೌಲಭ್ಯಗಳನ್ನು ನೀಡದಿದ್ದಲ್ಲಿ ಕಾನೂನು ಹೋರಾಟ ನಡೆಸಿ ನ್ಯಾಯ ಒದಗಿಸಲು ಸಮಿತಿ ಕಾರ್ಯೋನ್ಮುಖವಾಗಿದೆ ಎಂದರು. ಕೊಡಗು ಜಿಲ್ಲೆಯ ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ವರ್ಗಕ್ಕೆ ಯಾವುದೇ ಭದ್ರತೆ ಇಲ್ಲದಾಗಿದೆ. ಮರಗಳ ಕಡಿತಲೆ ಸೇರಿದಂತೆ ಕೆಲವೊಂದು ಅಪಾಯಕಾರಿ ಕೆಲಸ ನಿರ್ವಹಣೆಯ ಸಂದರ್ಭ ಕಾರ್ಮಿಕರು ಸಾವನ್ನಪ್ಪಿ ರುವ ಘಟನೆಗಳೂ ನಡೆದಿವೆ. ಆದರೆ, ಪ್ರಕರಣ ಮುಚ್ಚಿ ಹೋಗು ತ್ತಿದ್ದು, ಅತ್ಯಲ್ಪಪ್ರಮಾಣದಲ್ಲಿ ಪರಿಹಾರದ ಹಣ ನೀಡುವ ಮೂಲಕ ಕಾರ್ಮಿಕ ಕುಟುಂಬಗಳನ್ನು ವಂಚಿಸಲಾಗುತ್ತಿದೆ. ತೋಟ ಕೆಲಸ ನಿರ್ವಹಿಸುವಾಗ ಸುರಕ್ಷತೆಯ ದೃಷ್ಟಿಯಿಂದ ಕಾರ್ಮಿಕರಿಗೆ ಕೆಲವು ಸೌಲಭ್ಯಗಳನ್ನು ನೀಡಬೇಕೆನ್ನುವ ನಿಯಮವಿದ್ದು, ಇದನ್ನು ಮಾಲಕರು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಂದೇಶ್ ಜೋಸೆಫ್ ಡಿಸೋಜಾ ಆರೋಪಿಸಿದರು.
ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕರು ಸಾವಿಗೀಡಾಗು ತ್ತಿದ್ದಾರೆ. ಆದರೆ ಕೇವಲ 5 ಲಕ್ಷ ರೂ. ಪರಿಹಾರ ನೀಡಿ ಸುಮ್ಮನಾಗುತ್ತಿರುವ ಸರಕಾರ ಕಾರ್ಮಿಕರ ಜೀವ ಉಳಿಸುವು ದಕ್ಕಾಗಿ ಯಾವುದೇ ಶಾಶ್ವತ ಪರಿಹಾರವನ್ನು ಸೂಚಿಸುತ್ತಿಲ್ಲ. ಈ ಬೆಳವಣಿಗೆ ಕೂಡ ದೌರ್ಜನ್ಯ ಮತ್ತು ನಿರ್ಲಕ್ಷದ ಒಂದು ಭಾಗವಾಗಿದೆ ಎಂದು ಆರೋಪಿಸಿದ ಅವರು, ಕಾವೇರಿ ನದಿ ನೀರಿಗಾಗಿ ಹೋರಾಡುತ್ತಿರುವ ರೈತರನ್ನು ಬಂಧಿಸುವ ಮೂಲಕ ರಾಜ್ಯ ಸರಕಾರ ಹೋರಾಟದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ ಅವರು, ಜಾಗೃತಿ ಸಮಿತಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟವನ್ನು ರೂಪಿಸು ತ್ತಿದೆ ಎಂದರು. ಕೊಡಗು ಜಿಲ್ಲೆಯಲ್ಲೂ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾವತಿ ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿದ್ದು, ಅತ್ಯಾಚಾರ ಮತ್ತು ಹಿಂಸಾಚಾರದ ವಿರುದ್ಧ ಸಮಿತಿ ಧ್ವನಿ ಎತ್ತಲಿದೆ ಎಂದರು. ಇತ್ತೀಚೆಗೆ ಜಿಲ್ಲೆಯ ಕೆಲವು ಹೋಂ ಸ್ಟೇಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಮಹಿಳಾ ವರ್ಗಕ್ಕೆ ಅಗೌರವ ತೋರುವ ಹೋಂ ಸ್ಟೇಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನೆಪದಲ್ಲಿ ಮಹಿಳೆಯರನ್ನು ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕೆಂದು ಕುಸುಮಾ ಚಂದ್ರಶೇಖರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್ ಹಾಗೂ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಕೃಷ್ಣ ಎಚ್.ಹೈಲಾಪುರ ಉಪಸ್ಥಿತರಿದ್ದರು.