ಸಮಾಜಕ್ಕಾಗಿ ದುಡಿದವರನ್ನು ಗುರುತಿಸುವುದು ಸಂಸ್ಕಾರ: ಡಾ. ಸುಲೋಚನಾ
ಕಡೂರು, ಸೆ.17: ಧಾರ್ಮಿಕತೆ, ಸಮಾಜಸೇವೆ ಹಾಗೂ ಇತರ ಕ್ಷೇತ್ರಗಳಲ್ಲಿ ಸೇವೆಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಪುರಸ್ಕರಿಸುವುದು ಸಂಸ್ಕಾರ ಎಂದು ಬೀರೂರು ಪಿಜೆಎನ್‌ಎಂ ಕಾಲೇಜಿನ ನಿವೃತ್ತ್ತ ಪ್ರಾಂಶುಪಾಲೆ ಡಾ. ಸಿ.ಎಂ. ಸುಲೋಚನಾ ತಿಳಿಸಿದರು.
ಅವರು ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸರ್‌ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಶಿಕ್ಷಕ ಬಸವಪ್ಪಮಾತನಾಡಿ, ನಿವೃತ್ತಿ ಹೊಂದಿದ ಮೇಲೆ ಯಾರೂ ಗುರುತಿಸುವ ಕಾರ್ಯ ಮಾಡುವುದಿಲ್ಲ. ಯಾವುದೇ ಮಟ್ಟದ ಅಧಿಕಾರಿಗಳು ನಿವೃತ್ತಿ ಹೊಂದಿದರೆ ಸಮಾಜ ಅವರನ್ನು ಕೀಳರಿಮೆಯಿಂದ ನೋಡುತ್ತದೆ. ಶಿಕ್ಷಣ ಎಂಬುದು ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಸಂಸ್ಕೃತಿಗೆ ತಳ್ಳುತ್ತಿದ್ದಾರೆ. ಶಿಕ್ಷಕನಾದವನು ಮೊದಲು ಅಧ್ಯಯನಶೀಲರಾಗಬೇಕಿದೆ. ಉತ್ತಮ ಸಂಸ್ಕಾರವುಳ್ಳ ಮಕ್ಕಳನ್ನು ತಯಾರು ಮಾಡುವ ಕೆಲಸ ಶಿಕ್ಷಕರದ್ದಾಗಿದೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆಯ ಅಂಗವಾಗಿ ನಿವೃತ್ತ ಇಂಜಿನಿಯರ್ ಶಿವಾನಂದಯ್ಯ ಅವರನ್ನು ಪುರಸ್ಕರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸತೀಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷೆ ವಾಣಿ ಸತೀಶ್, ಎಂ. ರಂಗಪ್ಪ, ನರೇಂದ್ರನಾಥ್, ಡಾ. ದಿನೇಶ್, ನಾಗೇಂದ್ರ, ಗಿರೀಶ್, ಚಂದ್ರಣ್ಣ, ನಾಗರಾಜು, ಮುಹಮ್ಮದ್ ಅಲಿ, ಕೆ.ಆರ್. ಮಂಗಳಾ, ಶಾಲಿನಿ ನಾಗೇಂದ್ರ ಉಪಸ್ಥಿತರಿದ್ದರು.