ಹಾಲಕ್ಕಿ ಒಕ್ಕಲಿಗರ ಸಂಘದಿಂದ ಮನವಿ
ಅಂಕೋಲಾ, ಸೆ.17: ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಅಧ್ಯಕ್ಷ ಸೋಮೇಶ್ವರ ಓರಾನ್ ಅವರು ಕಾರವಾರ ಕಡೆಯಿಂದ ಉಡುಪಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಜಿ.ಸಿ. ಕಾಲೇಜು ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಶನಿವಾರ ಮನವಿ ಸಲ್ಲಿಸಲಾಯಿತು.
ಬಹು ವರ್ಷಗಳಿಂದ ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಹೋರಾಟಗಳು ನಡೆಯುತ್ತಿದ್ದು, ಇದರ ಜೊತೆಗೆ ಹಾಲಕ್ಕಿ ಸಮುದಾಯದ ನಿರ್ಗತಿಕರಿಗೆ ಮನೆ ನಿರ್ಮಾಣ, ಬಾವಿ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ನಮ್ಮ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ತಾವು ಪ್ರಯತ್ನಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಯೋಗದ ಅಧ್ಯಕ್ಷರಾದ ಸೋಮೇಶ್ವರ ಓರಾನ್ ಅವರ ಜೊತೆಗೆ ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ ಹಾಲಕ್ಕಿ ಜನಾಂಗದ ಸಮಸ್ಯೆಗಳನ್ನು ಮನವರಿಕೆ ಮಾಡಿದರು. ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗದ ಅಧ್ಯಕ್ಷರು ನೆರವನ್ನು ನೀಡುವ ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಲ್ಲಾಭಕ್ಷ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಎಚ್. ಗೌಡ, ಕೋಶಾಧ್ಯಕ್ಷ ರಮೇಶ ಗೌಡ ಬಿಣಗಾ, ಪ್ರಮುಖರಾದ ಸುಕ್ರು ಗೌಡ ಹಡವ, ಹಮ್ಮು ಗೌಡ ಶಿರೂರು, ನೂರಾರು ಹಾಲಕ್ಕಿ ಸಮಾಜದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ್ದರು.