×
Ad

ಕಾರವಾರದಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

Update: 2016-09-17 22:40 IST

 ಕಾರವಾರ, ಸೆ.17: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಸೆ.21 ಮತ್ತು 22ರಂದು ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ಟಿ. ಭಟ್ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಪೂ ಶಿಕ್ಷಣ ಇಲಾಖೆ, ಸಿದ್ದರ ಮಲ್ಲಿಕಾರ್ಜುನ ಪ.ಪೂ. ಕಾಲೇಜು, ಜಿಲ್ಲಾ ಪ.ಪೂ ಕಾಲೇಜುಗಳ ಬೋಧಕರ ಹಾಗೂ ಬೋಧಕೇತರ ಸಿಬ್ಬಂದಿ ಸಂಘಗಳ ಸಹಕಾರದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಯ 96 ಪದವಿ ಪೂರ್ವ ಪಿಯು ಕಾಲೇಜುಗಳ ಒಟ್ಟು 60 ತಂಡಗಳಿಂದ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ರಾಜ್ಯಮಟ್ಟದಲ್ಲಿ ಗೆದ್ದ ಕ್ರೀಡಾಪಟುಗಳು ತೆಲಂಗಾಣದ ನೆಲಗೋಡದಲ್ಲಿ ಅ.30ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು, ಕೊಪ್ಪಳ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ನುರಿತ ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ ಎಂದರು. ನಗರದ ದೈವಜ್ಞ ಕಲ್ಯಾಣ ಮಂಟಪ ಹಾಗೂ ಯೂನಿಟಿ ಹೈಸ್ಕೂಲ್ ಕಟ್ಟಡದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಲಾಗಿದೆ. ಸರಕಾರದಿಂದ ಕ್ರೀಡಾಕೂಟ ಆಯೋಜನೆಗೆ ಸುಮಾರು 50 ಸಾವಿರ ರೂ. ಅನುದಾನ ಲಭಿಸಿದೆ. ಆದರೆ ಕ್ರೀಡಾಕೂಟ ನಡೆಸಲು ಸುಮಾರು ಎರಡೂವರೆ ಲಕ್ಷ ರೂ. ವೆಚ್ಚವಾಗಲಿದ್ದು ಬಾಕಿ ಮೊತ್ತವನ್ನು ಶಿಕ್ಷಕರು ಹಾಗೂ ಬೋಧಕೇತರ ನೌಕರರ ಸಂಘದಿಂದಲೇ ಭರಿಸಲು ನಿರ್ಧರಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ದರ ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಪಿ. ನಾಯಕ, ಉಪನ್ಯಾಸಕ ಜಿ. ಡಿ. ಮನೋಜ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News