ಬಿಎಸ್‌ವೈ ಎಚ್ಚರಿಕೆಗೆ ಮಣಿಯದ ಈಶ್ವರಪ್ಪ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಚುರುಕು

Update: 2016-09-17 18:16 GMT

 ಬೆಂಗಳೂರು, ಸೆ.17: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೀಡಿರುವ ಎಚ್ಚರಿಕೆಗೂ ಮಣಿಯದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಶನಿವಾರ ವಿಜಯನಗರದ ಅತ್ತಿಗುಪ್ಪೆ ವಾರ್ಡ್‌ನ ಬಿಬಿಎಂಪಿ ಸದಸ್ಯ ಡಾ.ರಾಜು ಅವರ ನಿವಾಸದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಭೆಯಲ್ಲಿ ಪಾಲ್ಗೊಂಡ ಈಶ್ವರಪ್ಪ, ‘ಹಿಂದ’ ಸಂಘಟನೆಗೆ ಸಂಬಂಧಿಸಿದಂತೆ ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಸೋಮಣ್ಣ ಹಾಜರ್: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರು.

ಯಡಿಯೂರಪ್ಪರ ಕಟ್ಟಾ ಬೆಂಬಲಿಗರಾಗಿದ್ದ ಸೋಮಣ್ಣ, ಅವರು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಉಳಿದುಕೊಂಡಿದ್ದರು.

ಇದರಿಂದಾಗಿ, ಸೋಮಣ್ಣ ವಿರುದ್ಧ ಮುನಿಸಿಕೊಂಡಿದ್ದ ಯಡಿಯೂರಪ್ಪ, ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಸೋಮಣ್ಣಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಸದಾನಂದಗೌಡ ಮಧ್ಯಪ್ರವೇಶದಿಂದಾಗಿ ಸೋಮಣ್ಣಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿತ್ತು.

ಬಿಜೆಪಿ ರಾಜ್ಯ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೆ ಅಸಮಾಧಾನ ಹೊರಹಾಕಿದ್ದ ಈಶ್ವರಪ್ಪ ಜೊತೆ ಸೋಮಣ್ಣ ಕಾಣಿಸಿಕೊಂಡಿರುವುದು ಮತ್ತಷ್ಟು ರಾಜಕೀಯ ಬೆಳವಣಿಗೆಗಳಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ನೆಪದಲ್ಲಿ ರಾಯಣ್ಣ ಬ್ರಿಗೇಡ್ ಸಭೆ ನಡೆಸಿದ ಈಶ್ವರಪ್ಪಗೆ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ, ವಿಧಾನಪರಿಷತ್ತಿನ ಮಾಜಿ ಸದಸ್ಯ ಅಶ್ವಥ್‌ನಾರಾಯಣ, ಮಾಜಿ ಮೇಯರ್ ವೆಂಕಟೇಶ್‌ಮೂರ್ತಿ, ಮುಕುಡಪ್ಪ ಸೇರಿದಂತೆ ಇನ್ನಿತರ ಮುಖಂಡರು ಬೆಂಬಲ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News