ಚಲೋ ಉಡುಪಿ: ಉನಾ ಮಾದರಿ ಹೋರಾಟಕ್ಕೆ ಭರದ ಸಿದ್ಧತೆ
ಉಡುಪಿ, ಸೆ.17: ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ದೇಶಾದ್ಯಂತ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ವಿರೋಧಿ ಸಲು ಅ.4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉದ್ಘಾಟನೆ ಗೊಳ್ಳುವ ಚಲೋ ಉಡುಪಿ ಸ್ವಾಭಿಮಾನಿ ಸಂಘರ್ಷ ಜಾಥಾ ಅ.9ರಂದು ಉಡುಪಿಗೆ ಬರಲಿದೆ. ದಲಿತ, ಹಿಂದುಳಿದ ಸಮುದಾಯಗಳ ವಿವಿಧ ಸಂಘಟನೆಗಳೊಂದಿಗೆ ಪ್ರಗತಿ ಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಈ ಜಾಥಾದಲ್ಲಿ ಸುಮಾರು 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಡೆಸಬೇಕಾದ ಕಾರ್ಯಕ್ರಮ, ಸಿದ್ಧತೆಗಳ ಕುರಿತಂತೆ ಚರ್ಚಿಸಲು ಮೊದಲ ಹಂತದ ಪೂರ್ವಭಾವಿ ಸಭೆ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯಿತು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ವಿವಿಧ ದಲಿತ ಸಂಘರ್ಷ ಸಮಿತಿಗಳು, ಸಿಐಟಿಯು, ಅಲ್ಪಸಂಖ್ಯಾತರ ವೇದಿಕೆ, ಮುಸ್ಲಿಮ್ ಒಕ್ಕೂಟ, ಕೆಥೊಲಿಕ್ ಸಭಾ, ಎಸ್‌ಐಒ, ಬೌದ್ಧ ಮಹಾಸಭಾ ಮತ್ತಿ ತರ ಸಂಘಟನೆಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಿದ್ದಾರೆ. ಅ.9ರಂದು ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸುವುದು. ಬೀಡಿನಗುಡ್ಡೆಯಲ್ಲಿರುವ ಮಹಾತ್ಮ ಗಾಂಧಿ ಬಯಲು ಕ್ರೀಡಾಂಗಣದಲ್ಲಿ ಸಮಾರೋಪ ಸಭೆ ಸಂಘಟಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕಾಗಿ ತಾತ್ಕಾಲಿಕ ಸ್ವಾಗತ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಸುಂದರ ಮಾಸ್ತರ್, ಸಂಚಾಲಕರಾಗಿ ಶ್ಯಾಮರಾಜ ಬಿರ್ತಿ, ಹುಸೈನ್ ಕೋಡಿಬೆಂಗ್ರೆ ಕಾರ್ಯ ನಿರ್ವ ಹಿಸಲಿದ್ದಾರೆ. ಸೆ.25ರಂದು ಎರಡನೆ ಹಂತದ ಪೂರ್ವಭಾವಿ ಸಭೆ ನಡೆಯಲಿದೆ.
ಮೊದಲ ಸಭೆಯಲ್ಲಿ ವಿವಿಧ ಸಂಘಟನೆಗಳ ನಾಯಕರಾದ ಬಿ.ಆರ್.ಭಾಸ್ಕರ ಪ್ರಸಾದ್, ಹರ್ಷ ಕುಮಾರ್ ಕುಗ್ವೆ, ದಿನೇಶ್ ಕುಮಾರ್ ದಿನೂ, ಕೆ.ಎಲ್.ಅಶೋಕ್, ಮುನೀರ್ ಕಾಟಿಪಳ್ಳ, ಗುಲಾಬಿ ಬಿಳಿಮಲೆ, ಜಯನ್ ಮಲ್ಪೆ, ಶ್ಯಾಮರಾಜ ಬಿರ್ತಿ, ವಿಠಲ ತೊಟ್ಟಂ, ಸುಂದರ ಕಪ್ಪೆಟ್ಟು, ಸುಂದರ ಮಾಸ್ತರ್, ಸುರೇಶ್ ಮಾಸ್ತರ್, ವರದರಾಜ ಬಿರ್ತಿ, ಪರಮೇಶ್ವರ್ ಉಪ್ಪೂರು, ಾ.ವಿಲಿಯಂ ಮಾರ್ಟಿಸ್, ಸಿರಿಲ್ ಮಥಾಯಿಸ್, ಬಾಲಕೃಷ್ಣ ಶೆಟ್ಟಿ, ಬಿ.ವಿ.ಭಟ್, ಸಲಾಹುದ್ದೀನ್, ಖತೀಬ್ ಅಬ್ದುರ್ರಶೀದ್, ಮುಹಮ್ಮ್ಮದ್ ಇದ್ರೀಸ್, ಹುಸೈನ್, ಯಾಸೀನ್ ಕೋಡಿಬೆಂಗ್ರೆ, ಜಿ.ರಾಜಶೇಖರ್, ಣಿರಾಜ್, ದಿನಕರ ಬೆಂಗ್ರೆ, ಉಮೇಶ್ ಅಂಬಲಪಾಡಿ, ಶಶಿಧರ ಹೆಮ್ಮಾಡಿ, ಸುಮಾ, ಗೀತಾ ಪಾಂಗಳ, ಶಂಭು ಮಾಸ್ತರ್ ಮತ್ತಿತರರು ಭಾಗವಹಿಸಿದ್ದರು.
ಅ.4ರಂದು ಜಾಥಾ ಉದ್ಘಾಟನೆ
ಅ.4ರಂದು ಪೂರ್ವಾಹ್ನ 11ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ಜಾಥಾ ವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ನೆಲಮಂಗಲದಲ್ಲಿ ಬಹಿ ರಂಗ ಸಭೆ ಹಾಗೂ ನಾಟಕ ಪ್ರದರ್ಶನ ನಡೆಯಲಿದೆ.
‘ಆಹಾರ ನಮ್ಮ ಆಯ್ಕೆ- ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಈ ಅಭಿಯಾನ ನಡೆಯಲಿದೆ. ಗೋರಕ್ಷಣೆ ಹೆಸರಲ್ಲಿ ಅಮಾ ನವೀಯ ಕೃತ್ಯಗಳ ಖಂಡನೆಗಾಗಿ, ಭೂಮಿ, ಆಹಾರದ ಹಕ್ಕುಗಳಿಗಾಗಿ ಉನಾ ಮಾದರಿ ಯಲ್ಲಿ ಈ ಚಳವಳಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.