ಹಾಸನ: ಹಸು ತೊಳೆಯುವ ವಿಚಾರದಲ್ಲಿ ನಡೆದ ಜಗಳ ವರ್ಷದ ಕೂಸಿನ ಸಾವಿನಲ್ಲಿ ಅಂತ್ಯ
ಹಾಸನ, ಸೆ.18: ಕ್ಷುಲ್ಲಕ ಕಾರಣಕ್ಕೆ ನೆರೆಹೊರೆಯ ಮಂದಿಯ ನಡುವೆ ನಡೆದ ಜಗಳ ಒಂದು ವರ್ಷದ ಹೆಣ್ಣು ಮಗುವನ್ನು ಬಲಿ ಪಡೆಯುವುದರೊಂದಿಗೆ ಅಂತ್ಯ ಕಂಡ ಘಟನೆ ತಾಲೂಕಿನ ಶಾಂತಿಗ್ರಾಮ ಹೋಬಳಿಯ ದುಂಬಿನಗೆರೆಯಲ್ಲಿ ನಡೆದಿದೆ.
ಗಂಗರಾಜು ಹಾಗೂ ರೇಖಾ ಎಂಬ ದಂಪತಿಯ ಪುತ್ರಿ, ನಿರೀಕ್ಷಾ ಸಾವನ್ನಪ್ಪಿರುವ ದುರ್ದೈವಿ ಹೆಣ್ಣು ಮಗು.
ಗಂಗರಾಜುರ ಪತ್ನಿ ರೇಖಾ ತಮ್ಮ ಮನೆ ಮುಂದೆ ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದಾಗ ನೆರೆಮನೆಯವರಾದ ಸತೀಶ ಹಾಗೂ ನಂಜುಂಡೇಗೌಡ ಹಸು ತೊಳೆಯುವ ವಿಚಾರದಲ್ಲಿ ಗಲಾಟೆ ಉಂಟಾಗಿತ್ತು. ಕುಡಿಯುವ ನೀರು ಗಲೀಜಾಗುತ್ತೆ ಎಂದು ರೇಖಾ ಅವರು ಸತೀಶ್ ಹಾಗೂ ನಂಜುಂಡೇಗೌಡನಿಗೆ ಹೇಳಿದ್ದರು ಎನ್ನಲಾಗಿದೆ.
ಈ ವೇಳೆ ಸತೀಶ್ ಮನೆಯವರು ಗಂಗರಾಜು, ಆತನ ಪತ್ನಿ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ಗಂಗರಾಜು ಕೈಯಲ್ಲಿದ್ದ ಒಂದು ವರ್ಷದ ಮಗು ನಿರೀಕ್ಷಾ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ನಿರೀಕ್ಷಾ ಶನಿವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸತೀಶ, ನಂಜುಂಡೇಗೌಡ, ಜಯಮ್ಮ ಹಾಗೂ ತಂಗ್ಯಮ್ಮ ಸೇರಿದಂತೆ 6 ಮಂದಿ ಮೇಲೆ ಹಾಸನ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.