×
Ad

ಉ.ಕ. ಜಿಲ್ಲಾ ಆರೋಗ್ಯ ಇಲಾಖೆಗೆ 100 ಕೋಟಿ ರೂ. ಅನುದಾನ ನೀಡಿದ್ದೇನೆ : ಆರ್.ವಿ.ದೇಶಪಾಂಡೆ

Update: 2016-09-18 19:57 IST

ಮುಂಡಗೋಡ, ಸೆ.18: ವೈದ್ಯರಲ್ಲಿ ಮತ್ತು ಶಿಕ್ಷಕರಲ್ಲಿ ಸೇವೆ ಮಾಡುವ ಮನೋಭಾವನೆ ಹೊಂದಿರಬೇಕು. ವೈದ್ಯ, ಶಿಕ್ಷಕರ, ವೃತ್ತಿ ಅತ್ಯಂತ ಪವಿತ್ರವಾದದ್ದು. ಈ ಸೇವೆ ಮಾಡಲು ಅವಕಾಶ ಕೊಟ್ಟಿದ್ದು ಆ ದೇವರ ಕೊಟ್ಟ ವರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಮೇಲ್ದರ್ಜೆಗೇರಿದ ತಾಲೂಕು ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಜನ್ಮ ಲಭಿಸುವುದೇ ಒಂದು ಪುಣ್ಯ. ಮಾನವನಾಗಿ ಹುಟ್ಟಿ, ಮಾನವನಾಗಿ ಇದ್ದು ಒಳ್ಳೆಯ ಗುಣವನ್ನು ಹೊಂದಿ, ಸೇವೆ ಮಾಡುವ ಮನೋಭಾವನೆಯನ್ನು ಇಟ್ಟುಕೊಳ್ಳಬೇಕು. ಈ ತಾಲೂಕಿನ ಜನತೆ ನೀಡಿದ ಬೆಂಬಲದ ಪರಿಣಾಮವಾಗಿ ನಾನು ಇಂದು ಈ ಸಚಿವ ಸ್ಥಾನದಲ್ಲಿ ಇದ್ದೇನೆ. ಇಲ್ಲಿನ ಮತದಾರರು 25 ವರ್ಷಗಳ ಕಾಲ ನನ್ನನ್ನು ಚುನಾಯಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಈ ಆಸ್ಪತ್ರೆಯಿಂದ ಇಲ್ಲಿನ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಜಿಲ್ಲೆಯ ಆರೋಗ್ಯ ಇಲಾಖೆ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ತಂದಿದ್ದೇನೆ. ಈವರೆಗೂ ಇಷ್ಟು ಅನುದಾನವನ್ನು ತರಲು ಯಾರಿಂದಲೂ ಸಾಧ್ಯವಾಗಿಲ್ಲ. ವೈದ್ಯರ ವೇತನವನ್ನು ಹೆಚ್ಚಿಸಿದರೂ ಕೂಡ ವೈದ್ಯರು ಸರಕಾರಿ ಸೇವೆಗೆ ಬರಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು.

ಕೆಎಲ್‌ಇ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಹೊಂದಿದೆ. ಈ ಸಂಸ್ಥೆ 1 ಲಕ್ಷಕ್ಕಿಂತ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ತಪಾಸಣೆ ಮಾಡುವ ಗುರಿ ಹೊಂದಿದೆ. ಈ ಪೈಕಿ 80 ರಿಂದ 85 ಸಾವಿರ ಜನರಿಗೆ ಉಚಿತ ಚಿಕಿತ್ಸೆ ತಪಾಸಣೆ ನೀಡಲಾಗಿದೆ. ಆರೋಗ್ಯ ತಪಾಸಣೆಯ ನಂತರ ಐದು ದಿನಗಳ ಕಾಲ ಔಷಧೋಪಚಾರ ಕೂಡ ನೀಡಲಾಗುತ್ತದೆ. ಕೆಎಲ್‌ಇ ಸಂಸ್ಥೆಯ ಈ ಸಮಾಜಮುಖಿ ಕಾರ್ಯಕ್ಕೆ ನಾನೂ ಕೂಡ ಸಹಕಾರ ನೀಡುವುದರೊಂದಿಗೆ ಬೆಂಬಲ ನೀಡುತ್ತೇನೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಅವರಿಗೆ ಶುಭಹಾರೈಸಿದರಲ್ಲದೇ, ಕಾವೇರಿ ವಿವಾದ ಇತ್ಯರ್ಥಕ್ಕೆ ನರೇಂದ್ರ ಮೋದಿ ಆಸಕ್ತಿ ವಹಿಸುವಂತಾಗಲಿ ಎಂದರು.

ಇದೇ ವೇದಿಕೆಯಲ್ಲಿ ಮುಂಡಗೋಡ ಪಟ್ಟಣಕ್ಕೆ 9 ಕೋಟಿ ರೂ. ವೆಚ್ಚದಲ್ಲಿ 24/7 ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದರು. ಸಾಲಗಾಂವ ಗ್ರಾಮದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಡಿಪ್ಲೊಮಾ ಕಾಲೇಜು ಕಟ್ಟಡ ಕಾಮಗಾರಿ ಮತ್ತು ಪಾಳಾ ಗ್ರಾಮದ ಶಾಲಾ ನೂತನ 6 ಕೊಠಡಿ ಮತ್ತು ಅಕ್ಷರದಾಸೋಹ ಕೊಠಡಿಯನ್ನು ಉದ್ಘಾಟಿಸಿದರು.

ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಕೆಎಲ್‌ಇ ವಿಶ್ವವಿದ್ಯಾನಿಲಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್‌ಸೆಟ್ ಹಳಿಯಾಳ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಶಿವರಾಮ ಹೆಬ್ಬಾರ, ಡಿಎಚ್‌ಒ ಡಾ.ಅಶೋಕಕುಮಾರ್, ವಿಭಾಗ ಕಾರ್ನಿರ್ವಾಹಕ ಅಭಿಯಂತರ ಎಸ್.ಎಸ್.ಪಾಳೆಗಾರ, ಶಿರಶಿ ಎಸಿ ರಾಜು ಮೋಗವಿರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಪಂ ಸದಸ್ಯ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಜಯಮ್ಮ ಹಿರೇಹಳ್ಳಿ, ತಾ.ಪಂ. ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ, ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಪ.ಪಂ. ಅಧ್ಯಕ್ಷ ರಫೀಕ ಇನಾಮದಾರ, ಉಪಾಧ್ಯಕ್ಷ ಫಕ್ಕೀರಪ್ಪಅಂಟಾಳ, ಪ.ಪಂ. ಸರ್ವಸದಸ್ಯರು, ಜನಪ್ರತಿನಿಧಿಗಳು, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News