×
Ad

ಶಿಕ್ಷಣ ಕೇಂದ್ರಗಳು ಗುಣಾತ್ಮಕ ಶಿಕ್ಷಣ ನೀಡುವತ್ತ ಗಮನಹರಿಸಲಿ: ಎಚ್.ಜಿ ಆಂಜನೇಯ

Update: 2016-09-18 22:08 IST

ಸೊರಬ, ಸೆ.18: ಶಿಕ್ಷಣ ಕೇಂದ್ರಗಳು ಧನಾತ್ಮಕ ಪರಿವರ್ತನೆಗಾಗಿ ಗುಣಾತ್ಮಕ ಶಿಕ್ಷಣ ನೀಡುವತ್ತ ಗಮನಹರಿಸಬೇಕಾಗಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ ಆಂಜನೇಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಐದನೆಯ ಸಾಹಿತ್ಯ ಸಂಜೆಯ ಗುರು ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಣದ ರಕ್ಷಕ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

 ಪ್ರಸ್ತುತ ಜಾರಿಯಲ್ಲಿರುವ ಶಿಕ್ಷಣದ ವ್ಯವಸ್ಥೆಯಲ್ಲಿ ಶಿಕ್ಷಕರು ಶಿಕ್ಷಣದ ನೇತಾರರಾಗಬೇಕಾಗಿದೆ. ಶಿಕ್ಷಣ ವ್ಯವಸ್ಥೆಯ ದಂಡನಾಯಕರಾದ ಶಿಕ್ಷಕರು ತಮ್ಮ ಶಿಕ್ಷಣದ ಬುನಾದಿಯಿಂದ ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿ ದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಜೀವನದ ಭದ್ರತೆಗಾಗಿ, ವೃತ್ತಿ ನೈಪುಣ್ಯತೆ ಬೆಳಸಿಕೊಳ್ಳುವಂತಹ, ಸಂಸ್ಕೃತಿ ಮತ್ತು ಸಂಸ್ಕಾರಗಳೆರಡನ್ನು ಬೆಳಸುವ ಶಿಕ್ಷಣ ನಮ್ಮದಾಗಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹಾಲೇಶ್ ನವುಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವೆಂಬರ್, ಮಾರ್ಚ್ ತಿಂಗಳಲ್ಲಿ ತಾಲೂಕಿನ ಐದನೆಯ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು, ಈ ಸಂದರ್ಭದಲ್ಲಿ ಉದಯೋನ್ಮುಕ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ವಿಶೇಷ ಬರಹಗಾರರಿಗೆ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಕಥೆ, ಕವನ, ಗಾಯನ, ಮೊದಲಾದ ಸ್ಪರ್ಧೆಗಳನ್ನು ಅಕ್ಟೋಬರ್‌ನಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಹಂತದಲ್ಲಿ ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಆಸಕ್ತರು ಇಂತಹ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು. ಇದೇ ಸಂದರ್ಭದಲ್ಲಿ ಪರಿಷತ್‌ನ ಹಿರಿಯ ಸದಸ್ಯರು ನಿವೃತ್ತ ಶಿಕ್ಷಕರಾದ ಚಾಮರಾಜ ನವಲೆ, ವೀರಪ್ಪ ಭೀಮಪ್ಪ ಜಾವೂರ್ ಮತ್ತು ಪ್ರಸಕ್ತ ವರ್ಷದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಚನ್ನಪ್ಪ ರಾಮಪ್ಪ ಲಮಾಣಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಜಡ್ಡಳ್ಳಿ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯೆ ಕೆ.ಜಿ.ಲೋಲಾಕ್ಷಮ್ಮ, ಪರಿಷತ್‌ನ ಕಾರ್ಯದರ್ಶಿ ದೀಪಕ್, ಸದಸ್ಯರಾದ ಮಾಲತೇಶ್, ನೀಲೇಶ್, ಚಂದ್ರಪ್ಪ ಅತ್ತಿಕಟ್ಟಿ, ರೇಣುಕಮ್ಮ ಗೌಳಿ, ಸುನಂದಾ, ರಮೇಶ್ ಶಾಸ್ತ್ರಿ, ಕೃಷ್ಣಹೆಗಡೆ, ಸಂಪತ್ ಕುಮಾರ್, ಆಶಾರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News