×
Ad

ಸರಕಾರಿ ನೌಕರರು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಿ: ಡಿ.ಎಂ.ಸತೀಶ್

Update: 2016-09-18 22:10 IST

 ಸಾಗರ, ಸೆ.18: ಸರಕಾರಿ ನೌಕರರು ಕಂಪ್ಯೂಟರ್ ಕಲಿಕೆಯಿಂದ ಹೊರಗೆ ಉಳಿದರೆ ವೃತ್ತಿಯಲ್ಲಿ ಉನ್ನತಿ ಸಾಧಿಸಲು ಸಾಧ್ಯವಿಲ್ಲ ಎಂದು ಉಪವಿಭಾಗಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಹೇಳಿದರು. ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರವಿವಾರ ಸರಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೆಲವೊಂದು ಇಲಾಖೆ ಹೊರತುಪಡಿಸಿ ರಾಜ್ಯ ಸರಕಾರ ಎಲ್ಲ ಇಲಾಖೆಗಳ ನೌಕರರಿಗೆ ಕಂಪ್ಯೂಟರ್ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಕಾಗದ ರಹಿತ ಕಚೇರಿ ಸ್ಥಾಪಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕಂಪ್ಯೂಟರ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಭಡ್ತಿ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದರು. ಆಧುನಿಕತೆಗೆ ಅನುಗುಣವಾಗಿ ಸೂಪರ್ ಕಂಪ್ಯೂಟರ್ ಬಳಕೆಗೆ ಬರುತ್ತಿದೆ. ಕೇವಲ ಸೌಲಭ್ಯ ಪಡೆಯಲು ಮಾತ್ರ ಕಂಪ್ಯೂಟರ್ ಕಲಿಕೆ ಅಲ್ಲ. ಕಂಪ್ಯೂಟರ್ ಕಲಿಕೆಯಿಂದ ಬಹುತೇಕ ವಿಷಯಗಳ ಕುರಿತು ಅರಿವು ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೌಕರ ವರ್ಗ ಗಮನ ಹರಿಸಬೇಕು ಎಂದರು. ಮುಖ್ಯ ಅತಿಥಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎನ್.ಷಡಾಕ್ಷರಿ ಮಾತನಾಡಿ, ರಾಜ್ಯ ಸರಕಾರ ಮಾರ್ಚ್ 7, 2012ರಲ್ಲಿ ಕಂಪ್ಯೂಟರ್ ಸಾಕ್ಷರತೆ ಕುರಿತು ಆದೇಶ ಜಾರಿಗೆ ತಂದಿದೆ. ಮಾರ್ಚ್7, 2017ರೊಳಗೆ ಕಂಪ್ಯೂಟರ್ ಪರೀಕ್ಷೆ ಉತ್ತೀರ್ಣ ಮಾಡಬೇಕು. ಆದರೆ ಇದನ್ನು ನೌಕರ ವರ್ಗ, ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಸರಕಾರಿ ನೌಕರರ ಸಂಘ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಲ್ಪಿಸಿದೆ ಎಂದರು. ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ನೌಕರ ವರ್ಗವನ್ನು ಪುನಶ್ಚೇತನಗೊಳಿಸಿ, ಅವರಲ್ಲಿ ಕಾರ್ಯತತ್ಪರತೆ ತುಂಬುವ ನಿಟ್ಟಿನಲ್ಲಿ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ನೌಕರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಫುಲ್ಲಚಂದ್ರ ಎಸ್.ಬಿ., ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಬಸವನಗೌಡ, ಶಾಂತರಾಜ್, ಅಶೋಕ್, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಿ.ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News