×
Ad

ಸ್ವಸಹಾಯ ಸಂಘದಿಂದ 149 ಕೋ.ರೂ. ಸಾಲ ವಿತರಣೆ

Update: 2016-09-18 22:14 IST

 ಚಿಕ್ಕಮಗಳೂರು, ಸೆ.18: ಡಿಸಿಸಿ ಬ್ಯಾಂಕ್‌ನಲ್ಲಿ 13 ಸಾವಿರ ಸ್ವಸಹಾಯ ಸಂಘಗಳ ಮೂಲಕ 149 ಕೋಟಿ ರೂ. ಸಾಲವನ್ನು ಗ್ರಾಮೀಣ ಭಾಗದ ಬಡಜನರಿಗೆ ನೀಡಿ ಆರ್ಥಿಕವಾಗಿ ಶಕ್ತಿ ತುಂಬಲಾಗಿದೆ ಎಂದು ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ತಿಳಿಸಿದರು.

ಅವರು ನಗರದ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿದ ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಎಸ್. ವಸ್ತ್ರದ್ ಅವರಿಗೆ ಗೌರವಿಸಿ ಬಳಿಕ ಮಾಹಿತಿ ನೀಡಿದರು. ಬಿ ವರ್ಗದ ಬ್ಯಾಂಕ್‌ಗಳ ಪೈಕಿ ನಮ್ಮ ಸಂಸ್ಥೆ ಅಪೆಕ್ಸ್ ಬ್ಯಾಂಕ್‌ನಿಂದ 13-14ನೆ ಸಾಲಿನಲ್ಲಿ ಪ್ರಥಮಸ್ಥಾನ ಪಡೆದು 1ಲಕ್ಷ ರೂ. ಬಹುಮಾನವನ್ನು ಪಡೆದಿದ್ದು, 14-15ನೆ ಸಾಲಿನಿಂದ ಎ ವರ್ಗದ ಬ್ಯಾಂಕ್ ಆಗಿ ಪರಿವರ್ತನೆಯೊಂದಿಗೆ ಮುಂದುವರಿದಿದೆ. ನಬಾರ್ಡ್ ಸಹಯೋಗದೊಂದಿಗೆ ಈ ಸಂಸ್ಥೆ ಟಿಸಿಎಸ್ ಕಂಪೆನಿಯ ಸಾಫ್ಟ್‌ವೇರ್ ನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಆರ್‌ಟಿಜಿಎಸ್ ಮತ್ತು ಎನ್‌ಇಎಫ್‌ಟಿ ಹಾಗೂ ಡಿಬಿಟಿ ಎಸ್‌ಎಂಎಸ್ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ, ಜೀವನ್‌ಜ್ಯೋತಿ, ಅಟಲ್ ಪೆನ್‌ಷನ್ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಎಟಿಎಂ, ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲು ಸಿದ್ಧ್ದತೆ ಮಾಡಲಾಗಿದೆ ಎಂದರು.

ಜಿಲ್ಲೆಯ 121 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ 118 ಸಂಘಗಳಲ್ಲಿ ಎಲ್ಲ ಕೆಸಿಸಿ ಸಾಲಗಾರರ ಉಳಿತಾಯ ಖಾತೆಯನ್ನು ಬ್ಯಾಂಕ್‌ನಲ್ಲಿ ತೆರೆಯಲಾಗಿದೆ. ಶೀಘ್ರದಲ್ಲಿಯೇ ಪೂರ್ಣ ಹಂತದಲ್ಲಿ ಗ್ರಾಹಕರಿಗೆ ಡೆಬಿಟ್ ಕಾರ್ಡ್ ವಿತರಿಸಲಾಗುವುದು ಎಂದರು.

ಬ್ಯಾಂಕ್‌ನಲ್ಲಿ ಖಾಯಂ ನೌಕರರ ಕೊರತೆಯಿದ್ದು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 89 ನೌಕರರಲ್ಲಿ ಮುಂದಿನ ವರ್ಷ 5 ಜನ ನಿವೃತ್ತಿ ಹೊಂದಲಿದ್ದಾರೆ. 1998 ರಲ್ಲಿ ಬ್ಯಾಂಕ್‌ನ 65 ಕೋಟಿ ರೂ. ದುಡಿಯುವ ಬಂಡವಾಳವಿದ್ದು, ಹಾಲಿ 700 ಕೋಟಿ ರೂ. ಗೆ ಏರಿಕೆಯಾಗಿ ಪ್ರಗತಿ ಹೊಂದಿದೆ. ಬ್ಯಾಂಕ್‌ನ ಭವಿಷ್ಯ ದೃಷ್ಟಿಯಿಂದ 50 ಕಿರಿಯ ಸಹಾಯಕರು ಮತ್ತು 28 ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ವೇತನ ಶ್ರೇಣಿಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಆರ್.ಜೆ. ಕಾಂತರಾಜ್, ತರಿಕೆರೆಯ ಎಆರ್‌ಸಿಎಸ್ ರಮೇಶ್, ಚಿಕ್ಕಮಗಳೂರು ಎಆರ್‌ಸಿಎಸ್ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News