ಮೆಣಸಿನ ಫಸಲು ನಾಶ ಸಚಿವರ ಗಮನಕ್ಕೆ ತರುವ ಭರವಸೆ
ಚಿಕ್ಕಮಗಳೂರು, ಸೆ.18: ಈ ಸಾಲಿನ ಮೆಣಸಿನ ಫಸಲನ್ನು ಉಳಿಸಿಕೊಳ್ಳಲು ರೈತರ ನೆರವಿಗೆ ಬರಲು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡಲಾಗುವುದೆಂದು ರಾಜ್ಯ ಸಂಬಾರ ಮಂಡಳಿ ನಿರ್ದೇಶಕ ಜಿ.ಬಿ. ಪವನ್ ತಿಳಿಸಿದರು.
ಅವರು ರವಿವಾರ ಮೂಡಿಗೆರೆ ತಾಲೂಕಿನ ನಂದೀಕೆರೆ, ತೋಡವಳ್ಳಿ ಭಾಗದ ವಿವಿಧ ಮೆಣಸಿನ ತೋಟಗಳಿಗೆ ಭೇಟಿ ನೀಡಿ ಮಾತನಾಡಿದರು. ಕಾಳು ಮೆಣಸಿನ ಫಸಲು ಈ ಭಾಗದಲ್ಲಿ ಭಾಗಶಃ ಉತ್ತಮವಾಗಿದ್ದು, ಮಳೆಯ ಅಭಾವದಿಂದ ಬೆಳೆದಿರುವ ಫಸಲು ಭೂಮಿ ಪಾಲಾಗುತ್ತಿರುವುದಲ್ಲದೆ, ರೈತರು ಸಂಕಷ್ಟದಲ್ಲಿ ಸಿಲುಕುವ ಮುನ್ಸೂಚನೆ ಇದೆ ಎಂದರು.
ಮಳೆಯ ಅಭಾವದಿಂದ ಮೆಣಸಿನ ಎಲೆ ಮತ್ತು ಬಳ್ಳಿ ಹಳದಿ ಬಣ್ಣದ ರೋಗಕ್ಕೆ ತುತ್ತಾಗುತ್ತಿದ್ದು ಫಸಲು ನಾಶವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಪ್ರತಿವರ್ಷ ಈ ಭಾಗದ ರೈತರು ಕಾಳುಮೆಣಸು ಬೆಳೆಯನ್ನು ಜೀವನೋಪಾಯ ಮಾರ್ಗವಾಗಿಸಿಕೊಂಡಿದ್ದು, ಈ ವರ್ಷ ಬೆಳೆಯ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ. ಈ ಬಗ್ಗೆ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಸರಕಾರಕ್ಕೆ ಶೀಘ್ರವೇ ವಾಸ್ತವ ವರದಿಯನ್ನು ನೀಡಲು ಒತ್ತಾಯಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಚಂದ್ರಮ್ಮ, ಉದಯ್, ನಿರ್ವಾಣಯ್ಯ ಉಪಸ್ಥಿತರಿದ್ದರು.