ಸರಕಾರ ಸಮಸ್ಯೆಆಲಿಸಲು ಜನರ ಮನೆ ಬಾಗಿಲಿಗೆ ಬರಲಿದೆ: ಮಲ್ಲಿಕಾರ್ಜುನ್
ದಾವಣಗೆರೆ, ಸೆ.18: ಅಧಿಕಾರಿಗಳು ಜನಸಾಮಾನ್ಯರ ಯಾವುದೇ ಸಮಸ್ಯೆಗಳಿಗೆ 24 ಗಂಟೆಗಳೊಳಗೆ ಸ್ಪಂದಿಸಬೇಕು. ಅವರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಸರಕಾರದ ಯೋಜನೆಯ ಫಲಾನುಭವಿಗಳೊಂದಿಗೆ ಹಮ್ಮಿಕೊಂಡಿದ್ದ ಜನಮನ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ಸರಕಾರ ಅನೇಕ ಉತ್ತಮ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ, ದಲಿತರ, ಶೋಷಿತರ ಏಳ್ಗೆಗಾಗಿ ಶ್ರಮಿಸುತ್ತಿದೆ. ಆದರೆ, ಯೋಜನೆಗಳ ಅನುಷ್ಠಾನ, ಕಾರ್ಯವೈಖರಿಯಲ್ಲಿ ಕೆಲ ಸಣ್ಣಪುಟ್ಟ ಗೊಂದಲ, ಸಮಸ್ಯೆಗಳು ಇದ್ದು, ಮುಂದಿನ ದಿನಗಳಲ್ಲಿ ಈ ಯಾವುದೇ ಸಮಸ್ಯೆಗಳು ಇರದಂತೆ ನೋಡಿಕೊಂಡು ಯೋಜನೆ ಸಂಪೂರ್ಣವಾಗಿ ಫಲಾನುಭವಿಗಳಿಗೆ ದೊರಕುವಂತೆ ಮಾಡಬೇಕಾಗಿದೆ ಎಂದರು.
ಶೀಘ್ರವೇ ಸೂರು:
ಪೌರಕಾರ್ಮಿಕರು ಸೇರಿದಂತೆ ಅನೇಕ ಬಡವರು ಆಶ್ರಯ ಮನೆಗಾಗಿ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಜಿಲ್ಲಾಡಳಿತ ಭೂಮಿ ಹುಡುಕಾಟದಲ್ಲಿ ತೊಡಗಿದೆ. ಭೂಮಿ ದರ ಹೆಚ್ಚಾದ ಹಿನ್ನೆಲೆಯಲ್ಲಿ ತುಸು ವಿಳಂಬವಾಗಿದ್ದು, ಶೀಘ್ರವೇ ಆಶ್ರಯ ಮನೆ, ನಿವೇಶನಗಳನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮಹತ್ವ ಯೋಜನೆಗಳಾದ ಅನ್ನಭಾಗ್ಯದಲ್ಲಿ 3.76 ಲಕ್ಷ ಜನತೆ, ಕ್ಷೀರಭಾಗ್ಯದಲ್ಲಿ 2.3 ಲಕ್ಷ ಮಕ್ಕಳು, ವಿದ್ಯಾಸಿರಿಯಲ್ಲಿ 10,766 ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಬರಪೀಡಿತ ಜಿಲ್ಲೆ ಘೋಷಣೆಗೆ ಸರ್ವೇ:
ಈಗಾಗಲೇ ಜಿಲ್ಲೆಯನ್ನು ಬರಪೀಡಿದ ಜಿಲ್ಲೆ ಎಂದು ಘೋಷಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ವೇ ಕಾರ್ಯ ಆರಂಭಿಸಿದ್ದು, ಶೀಘ್ರವೇ ಇದರ ವರದಿಯನ್ನು ಕಂದಾಯ ಇಲಾಖೆಗೆ ಕಳುಹಿಸಲಾಗುವುದು ಎಂದ ಅವರು, ಆರೋಗ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಎಲ್ಲರಿಗೂ ಉತ್ತಮ ಚಿಕಿತ್ಸೆ ಕೊಡಿಸುವ ಮೂಲಕ ಆರೋಗ್ಯವಂತ ಜಿಲ್ಲೆಯನ್ನಾಗಿಸಬೇಕು ಎಂದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಉಮಾ ರಮೇಶ್, ವಿಪ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಮೇಯರ್ ಅಶ್ವಿನಿ ವೇದಮೂರ್ತಿ, ಜಿಪಂ ಉಪಾಧ್ಯಕ್ಷ ಸಿದ್ದಪ್ಪ, ಉಪ ಮೇಯರ್ ಗೌಡ್ರು ರಾಜಶೇಖರ್, ಜಿಲ್ಲಾಧಿಕಾರಿ ಎಸ್.ಡಿ. ರಮೇಶ್, ಎಸ್‌ಪಿ ಭೀಮಾಶಂಕರ್ ಎಸ್. ಗುಳೇದ್, ಅಪಾರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್. ಡಿ ಮತ್ತಿತರರು ಉಪಸ್ಥಿತರಿದ್ದರು.
3 ತಿಂಗಳಿಗೊಮೆ್ಮ ಜನಮನ:
ಜನಮನದಲ್ಲಿ ಸರಕಾರವೇ ಜನರ ಮನೆ ಬಾಗಿಲಿಗೆ ಬರುವಂತಾಗಿದ್ದು, ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಸ್ಥಳದಲ್ಲೇ ಪರಿಹಾರ ಸೂಚಿಸುವ ಹಿನ್ನೆಲೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಇನ್ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಜನಮನ ಕಾರ್ಯಕ್ರಮ ಏರ್ಪಡಿಸಲಾಗುವುದು - ಎಸ್.ಎಸ್. ಮಲ್ಲಿಕಾರ್ಜುನ
ಜಿಲ್ಲಾ ಉಸ್ತುವಾರಿ ಸಚಿವ