ಬೆಂಗಳೂರು: ಬಸ್‌ಗಳಿಗೆ ಬೆಂಕಿಯಿಟ್ಟ ಪ್ರಕರಣ; ಯುವತಿ ಸೇರಿ 11 ಮಂದಿಯ ಬಂಧನ

Update: 2016-09-18 18:18 GMT

ಸಾರ್ವಜನಿಕರಿಂದ 28 ವೀಡಿಯೊ ವಶ

ಬೆಂಗಳೂರು, ಸೆ. 18: ಕಾವೇರಿ ನದಿ ನೀರು ಸಂಬಂಧ ಸೆ.12ರಂದು ನಗರದೆಲ್ಲೆಡೆ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಕೆಪಿಎನ್ ಟ್ರಾವೆಲ್ಸ್‌ನ ಬಸ್‌ಗಳಿಗೆ ಬೆಂಕಿಯಿಟ್ಟಿದ್ದ ಪ್ರಕರಣದ ಸಂಬಂಧ ಒಬ್ಬಳು ಯುವತಿ ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

 ಬಂಧಿತ ಯುವತಿಯನ್ನು ಇಲ್ಲಿನ ಡಿಸೋಜಾನಗರದ ನಿವಾಸಿ ಭಾಗ್ಯಶ್ರೀ (21) ಎಂದು ಗುರುತಿಸಿದ್ದು, ಈಕೆ ಮೂಲತಃ ಯಾದಗಿರಿ ಜಿಲ್ಲೆಯವಳು ಎಂದು ಗೊತ್ತಾಗಿದೆ. ಭಾಗ್ಯಶ್ರೀ ಮೂರು ವರ್ಷಗಳಿಂದ ನಗರದಲ್ಲಿ ವಾಸವಾಗಿರುವಳೆಂದು ರಾಜರಾಜೇಶ್ವರಿ ಠಾಣಾ ಪೊಲೀಸರು ಖಚಿತ ಪಡಿಸಿದ್ದಾರೆ.

ಕೂಲಿ ಕೆಲಸ ಮಾಡುತ್ತಿರುವ ಭಾಗ್ಯಶ್ರೀಗೆ ದುಷ್ಕರ್ಮಿಗಳು ಬಿರಿಯಾನಿಯ ಆಸೆ ತೋರಿಸಿ, ದುಷ್ಕೃತ್ಯವನ್ನು ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆ.12ರ ಗಲಭೆಯಲ್ಲಿ ಭಾಗ್ಯಶ್ರೀ ಸೇರಿ ಒಟ್ಟು 42 ಮಂದಿ ಕೆಪಿಎನ್ ಟ್ರಾವೆಲ್ಸ್‌ಗೆ ಸೇರಿದ 42 ಬಸ್ಸುಗಳಿಗೆ ಬೆಂಕಿಯಿಟ್ಟಿದ್ದರು. ಶುಕ್ರವಾರ ಆಕೆಯನ್ನು ಬಂಧಿಸಿರುವ ಪೊಲೀಸರು ರವಿವಾರವೂ ವಿಚಾರಣೆಗೊಳಪಡಿಸಿದಾಗ ಕೆಲ ಕಿಡಿಗೇಡಿಗಳ ವಿವರವನ್ನು ಭಾಗ್ಯಶ್ರೀ ತಿಳಿಸಿದ್ದಾಳೆಂದು ತಿಳಿದುಬಂದಿದೆ.

28 ವೀಡಿಯೊ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಗರದೆಲ್ಲೆಡೆ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ನಾಶಪಡಿಸಿದ ಪ್ರಕರಣಗಳ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ಸೇರಿ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಚಿತ್ರೀಕರಿಸಲಾಗಿದ್ದ 28 ವೀಡಿಯೊಗಳನ್ನು ಸಾರ್ವಜನಿಕರು ಪೊಲೀಸರಿಗೆ ನೀಡಿದ್ದಾರೆ. ಸಿಐಡಿಗೆ ವರ್ಗಾವಣೆ: ಈ ಮಧ್ಯೆ ಕೆಪಿಎನ್ ಟ್ರಾವೆಲ್ಸ್‌ಗೆ ಬೆಂಕಿ ಹಚ್ಚಿದ ಪ್ರಕರಣ ನಿಗೂಢ ರೀತಿಯಲ್ಲಿದ್ದು, ಸಮಗ್ರ ತನಿಖೆಗೆ ಸಿಐಡಿಗೆ ವರ್ಗಾವಣೆ ಮಾಡಲು ಸರಕಾರ ಉದ್ದೇಶಿಸಿದೆ. ಸೋಮವಾರ ಈ ಸಂಬಂಧ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News