ಮಂಗಳೂರು ವಿವಿ ಶೌಚಾಲಯದಲ್ಲಿ ಕ್ಯಾಮರಾ ಪ್ರಕರಣ: ಆರೋಪಿಯ ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಮನವಿ

Update: 2016-09-18 18:22 GMT

ಮಂಗಳೂರು, ಸೆ.18: ಕೊಣಾಜೆ ಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಗುಪ್ತವಾಗಿ ಮೊಬೈಲ್ ಫೋನ್ ಕ್ಯಾಮರಾ ಇಟ್ಟ ಪ್ರಕರಣದಲ್ಲಿ ಬಂಧಿತನಿಗೆ ಸಿಕ್ಕಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ ಎಂ. ತಿಳಿಸಿದ್ದಾರೆ.

ನಗರದಲ್ಲಿರುವ ತನ್ನ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ಪ್ರಕಾರ ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಆರೋಪಿಗೆ ಜಾಮೀನು ಸಿಗಲು ಅನುಕೂಲವಾಗುವಂತೆ ಸಣ್ಣ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ರೀತಿ ಆರೋಪಿಸುವವರ ಜೊತೆ ಚರ್ಚಿಸಲಾಗುವುದು. ಗುಪ್ತ ಕ್ಯಾಮರಾ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪರವಾಗಿ ಪ್ರಭಾವಿಗಳ ಒತ್ತಡ ಕೆಲಸ ಮಾಡಿದ್ದು ಕಂಡುಬಂದರೆ ಅಂತಹ ಪ್ರಭಾವಿಗಳನ್ನೂ ಬಂಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಭಾರೀ ಆತಂಕ ಸೃಷಿಸಿದ್ದ ಶೌಚಾಲಯದಲ್ಲಿ ಗುಪ್ತ ಕ್ಯಾಮರಾ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಸಂತೋಷ್ ಆಚಾರ್ಯ ಮರುದಿನವೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು. ಇದು ಪ್ರಕರಣದ ತನಿಖೆ ಹಾಗೂ ಆತನ ಮೇಲೆ ದಾಖಲಾಗಿರುವ ಮೊಕದ್ದಮೆಯ ಬಗ್ಗೆ ಸಾರ್ವಜನಿಕ ಸಂಶಯಕ್ಕೆ ಕಾರಣವಾಗಿತ್ತು.

ಕಟೀಲು ಕ್ಷೇತ್ರದ ಅಪಮಾನ ಪ್ರಕರಣ: ತನಿಖೆಗೆ ಫೇಸ್‌ಬುಕ್ ಅಸಹಕಾರ

ಕಟೀಲು ಕ್ಷೇತ್ರದ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿಆರೋಪಿಗಳ ಪತ್ತೆಗೆ ಸಹಕರಿಸುವಂತೆ ಫೇಸ್‌ಬುಕ್ ಸಂಸ್ಥೆಗೆ ಮೂರು ನೋಟಿಸ್ ಕಳುಹಿಸಲಾಗಿದೆ. ಆದರೆ ಫೇಸ್‌ಬುಕ್ ಯಾವುದೇ ಸಹಕಾರ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News