ತಮಿಳುನಾಡಿಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ

Update: 2016-09-19 18:18 GMT

ಹೊಸದಿಲ್ಲಿ/ಬೆಂಗಳೂರು, ಸೆ.19: ತಮಿಳುನಾಡಿಗೆ 10 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ಗಳಂತೆ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಕಾವೇರಿ ಮೇಲುಸ್ತುವಾರಿ ಸಮಿತಿಯು ಆದೇಶ ನೀಡಿದೆ. ಸೋಮವಾರ ದಿಲ್ಲಿಯ ಶ್ರಮಶಕ್ತಿ ಭವನದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯ ಬಳಿಕ ಮಾತನಾಡಿದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ಈ ವಿಷಯ ತಿಳಿಸಿದರು.

ಕಾವೇರಿ ಕಣಿವೆ ಭಾಗದಲ್ಲಿನ ಜಲಾಶಯಗಳಿಗೆ ಕಳೆದ 15 ದಿನಗಳಿಂದ ಬರುತ್ತಿರುವ ನೀರಿನ ಒಳಹರಿವು, ಹೊರ ಹರಿವು, ಜಲಾಶಯಗಳಲ್ಲಿರುವ ನೀರಿನ ಮಟ್ಟ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಚರ್ಚೆ ನಡೆಸಿ, ಸೆ.21ರಿಂದ 30ರವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಲಾಗಿದೆ ಎಂದು ಶಶಿಶೇಖರ್ ಹೇಳಿದರು. ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ಆದೇಶವು ಉಭಯ ರಾಜ್ಯಗಳಿಗೆ ಸಮಾಧಾನ ತರದಿದ್ದರೆ, ಸುಪ್ರೀಂಕೋರ್ಟ್ ನಲ್ಲಿ ಈ ಆದೇಶವನ್ನು ಪ್ರಶ್ನಿಸಬಹುದಾಗಿದೆ. ಪ್ರತಿ ವರ್ಷ ಕಾವೇರಿ ನದಿ ನೀರು ಹಂಚಿಕೆಯು ಸಮಸ್ಯೆಯಾಗಿ ಪರಿಣಮಿಸುತ್ತಿದೆ. 10 ದಿನಗಳ ನಂತರ ಉಸ್ತುವಾರಿ ಸಮಿತಿಯು ಪುನಃ ಸಭೆ ಸೇರಲಿದ್ದು, ಸುಪ್ರೀಂ ಕೋರ್ಟ್ ನೀಡುವ ಆದೇಶದ ಬಗ್ಗೆ ಚರ್ಚೆ ನಡೆಸಲಿದೆ ಎಂದು ಶಶಿಶೇಖರ್ ತಿಳಿಸಿದರು.

ರಾಜ್ಯದ ವಿರೋಧ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ. ಕಾವೇರಿ ಕಣಿವೆ ಭಾಗದ ಜಲಾಶಯಗಳು ಬರಿದಾಗತೊಡಗಿವೆ. ಜಲಾಶಯಗಳಲ್ಲಿ ಇರುವಂತಹ ನೀರು ನಮ್ಮ ಜನರಿಗೆ ಕುಡಿಯುವ ಉದ್ದೇಶಕ್ಕೆ ಪೂರೈಸಬೇಕಾಗಿದೆ ಎಂದು ರಾಜ್ಯದ ಮುಖ್ಯಕಾರ್ಯದರ್ಶಿ ಅರವಿಂದಜಾಧವ್ ಸಮಿತಿಯ ನಿರ್ಧಾರವನ್ನು ವಿರೋಧಿಸಿದರು.

ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಸರಕಾರದ ಮುಖ್ಯಕಾರ್ಯದರ್ಶಿ ಡಾ.ಪಿ.ರಾಮಮೋಹನ್‌ರಾವ್, ಕರ್ನಾಟಕವು ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಈಗ ನೀರು ಹರಿಯುತ್ತಿದೆ. ಆದರೆ, ಸಾಂಬಾ ಬೆಳೆಗೆ ಹೆಚ್ಚಿನ ನೀರಿನ ಅಗತ್ಯವಿದೆ ಎಂದು ವಾದಿಸಿದರು.

ತಮಿಳುನಾಡು ಸರಕಾರವು ಪ್ರತಿನಿತ್ಯ 8 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಎದುರು ವಾದವನ್ನು ಮಂಡಿಸಿತ್ತು. ಆದರೆ, ಅಂತಿಮವಾಗಿ ಸಮಿತಿಯು 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿರುವ ಆದೇಶವನ್ನು ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ವಿರೋಧಿಸಿದ್ದು, ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿವೆ.

ಸಭೆಯಲ್ಲಿ ಪುದುಚೇರಿ ಸರಕಾರದ ಮುಖ್ಯಕಾರ್ಯದರ್ಶಿ ಮನೋಜ್ ಪರಿಡಾ, ಕೇರಳ ಸರಕಾರದ ಪ್ರತಿನಿಧಿಗಳು, ಕೇಂದ್ರ ಜಲ ಆಯೋಗದ ಅಧ್ಯಕ್ಷರು ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಬಿಗಿ ಭದ್ರತೆ

ಬೆಂಗಳೂರು, ಸೆ.19: ಕಾವೇರಿ ಮೇಲುಸ್ತುವಾರಿ ಸಮಿತಿ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ ನಗರದ ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ತಿಳಿಸಿದ್ದಾರೆ.

ಸಮಾಧಾನ ಆಗದಿದ್ದಲ್ಲಿ ಸುಪ್ರೀಂಗೆ ಹೋಗಬಹುದು

ಎರಡೂ ರಾಜ್ಯಗಳಿಗೆ ಸಲ್ಲಬೇಕಾದ ನೀರಿನ ಪ್ರಮಾಣದ ಕುರಿತು ಸಭೆಯಲ್ಲಿ ಮಾಹಿತಿ ಕಲೆಹಾಕಿ ಚರ್ಚೆ ನಡೆಸಿದ ಬಳಿಕ ತಮಿಳುನಾಡಿಗೆ ಸೆ.21ರಿಂದ 30ರ ವರೆಗೆ 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ನೀಡಲಾಗಿದೆ. ಈ ನಿರ್ಧಾರದಿಂದ ಸಮಾಧಾನ ಆಗದಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಆದೇಶವನ್ನು ಅಲ್ಲಿ ಪ್ರಶ್ನಿಸಲು ಎರಡೂ ರಾಜ್ಯ ಸರಕಾರಗಳಿಗೆ ಅವಕಾಶವಿದೆ.

 - ಶಶಿಶೇಖರ್, ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ

ಸುಪ್ರೀಂನಲ್ಲಿ ಪ್ರಶ್ನೆ: ಪರಮೇಶ್ವರ್

ಬೆಂಗಳೂರು, ಸೆ.19: ಕಾವೇರಿ ಮೇಲುಸ್ತುವಾರಿ ಸಮಿತಿಯು ತಮಿಳುನಾಡಿಗೆ 10 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಇಂದು ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ನಮಗೆ ನ್ಯಾಯ ಸಿಗಬಹುದೆಂಬ ಆಶಾಭಾವನೆಯನ್ನು ಹೊಂದಿದ್ದೆವು. ಆದರೆ, ಸಮಿತಿ ನೀಡಿರುವ ತೀರ್ಪು ನಿರಾಸೆ ತಂದಿದೆ ಎಂದರು.

ಕಾವೇರಿ ಮೇಲುಸ್ತುವಾರಿ ಸಮಿತಿಯು ನೀಡಿರುವ ಆದೇಶವು ರಾಜ್ಯದ ಪಾಲಿಗೆ ಮತ್ತೊಂದು ಪೆಟ್ಟು ನೀಡಿದೆ. ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೆ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿಯು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ರಾಜ್ಯದ ಹಿತಕ್ಕೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಪ್ರಸ್ತುತ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಮೇಲುಸ್ತುವಾರಿ ಸಮಿತಿಯ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ನಾಳೆ(ಮಂಗಳವಾರ) ಪ್ರಶ್ನಿಸುತ್ತೇವೆ. ಕಾವೇರಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಮೇಲುಸ್ತುವಾರಿ ಸಮಿತಿಯ ಆದೇಶದಿಂದಾಗಿ ಒಂದು ವೇಳೆ ನಾಳೆ ಯಾವುದಾದರು ಪ್ರತಿಭಟನೆಗಳು, ಅಹಿತಕರ ಘಟನೆಗಳು ಆಗುವ ಸಾಧ್ಯತೆಗಳಿದ್ದರೆ, ಸಂಬಂಧಪಟ್ಟ ಸ್ಥಳಗಳಲ್ಲಿ ಯಾವ ರೀತಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕು. ಹೆಚ್ಚುವರಿ ಪಡೆಗಳನ್ನು ಎಲ್ಲಿ ನಿಯೋಜಿಸಬೇಕು ಎಂಬುದರ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾವೇರಿ ಮೇಲುಸ್ತುವಾರಿ ಸಮಿತಿ ಎದುರು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ನಮ್ಮ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೂ ತಮಿಳು ನಾಡಿಗೆ ನೀರು ಬಿಡುಗಡೆ ಮಾಡುವಂತೆ ಯಾವ ಕಾರಣಕ್ಕಾಗಿ ಆದೇಶ ನೀಡಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಆದೇಶದ ಪ್ರತಿ ಲಭ್ಯವಾದ ಬಳಿಕ ಪರಿಶೀಲಿಸುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಮೇಲುಸ್ತುವಾರಿ ಸಮಿತಿ ಆದೇಶವನ್ನು ಪ್ರಶ್ನಿಸಲಾಗುವುದು.

- ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ

ಕರ್ನಾಟಕ ರಾಜ್ಯವನ್ನಿನ್ನ್ನು ದೇವರೇ ಕಾಪಾಡಬೇಕು. ತಮಿಳುನಾಡಿನ ಪ್ರತಿನಿಧಿ, ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ಅವರಿಂದ ರಾಜ್ಯಕ್ಕೆ ನ್ಯಾಯ ದೊರೆಯಲು ಸಾಧ್ಯವಿಲ್ಲ ಎಂಬ ಅನುಮಾನವನ್ನು ನಾನು ಈ ಹಿಂದೆಯೇ ವ್ಯಕ್ತಪಡಿಸಿದ್ದೆ. ಅದು ಇದೀಗ ನಿಜವಾಗಿದೆ. ರಾಜ್ಯದ ವಾಸ್ತವ ಸ್ಥಿತಿ ಗಂಭೀರವಾಗಿದ್ದು, ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು.

 - ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಕುಡಿಯುವ ನೀರಿಗೂ ತತ್ವಾರ ಸೃಷ್ಟಿಯಾಗಿರುವ ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಮೇಲುಸ್ತುವಾರಿ ಸಮಿತಿ ಉಭಯ ರಾಜ್ಯಗಳ ವಾಸ್ತವ ಸ್ಥಿತಿ ಅರಿಯುವಲ್ಲಿ ಸೋತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು.

- ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News