ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ವಾತಾವರಣ ಕಲ್ಪಿಸಿ: ಜಯಂತ ಕಾಯ್ಕಿಣಿ

Update: 2016-09-19 16:20 GMT

ಕಾರವಾರ, ಸೆ.19: ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಅಂಕ ಪಡೆಯುದಕ್ಕಾಗಿಯೇ ಸೀಮಿತಗೊಳಿಸಿದ್ದಾರೆ. ಆದರೆ ಇದು ಸರಿಯಲ್ಲ. ಮಕ್ಕಳು ಕೇವಲ ಅಂಕಗಳನ್ನು ಪಡೆಯುವುದರಿಂದ ಅವರು ಜ್ಞಾನವನ್ನು ವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. 

ಕಾರವಾರ ಎಜುಕೇಶನ್ ಸೊಸೈಟಿಯ ಸುಮತಿ ದಾಮ್ಲೆ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹೊರಗಿನ ಪ್ರಪಂಚದ ತಿಳುವಳಿಕೆ ಕೂಡಾ ಅಗತ್ಯ. ಜೊತೆಗೆ ಮಕ್ಕಳಿಗೆ ನಾವು ಸೂಚಿಸಿದ ಶಿಕ್ಷಣ ನೀಡುವ ಬದಲು ಅವರಿಗೆ ಆ ಬಗ್ಗೆ ತಿಳುವಳಿಕೆ ನೀಡಿ ಅವರ ಆಯ್ಕೆಗೆ ಅವಕಾಶ ಕಲ್ಪಿಸುವ ಆವಶ್ಯಕತೆ ಇದೆ ಎಂದರು.

ನಮ್ಮ ಶಿಕ್ಷಣದ ವ್ಯವಸ್ಥೆ ಕೇವಲ ರ್ಯಾಂಕ್ ಪಡೆದವರ ಕಡೆ ಗಮನಹರಿಸುತ್ತಿದೆ. ಅಲ್ಪ ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಕಡೆ ಇಲ್ಲ. ಸಾಮಾನ್ಯ ಜನರಾದ ಕೃಷಿಕ, ಕಾರ್ಮಿಕ ಇವರು ಯಾರ ಬದುಕನ್ನು ಉನ್ನತಮಟ್ಟಕ್ಕೇರಿಸಲು ಇಂದಿನ ಶಿಕ್ಷಣ ಪೂರಕವಾಗಿಲ್ಲ. ಹೀಗಿರುವಾಗ ಮಕ್ಕಳಿಗೆ ನಾವು ಮೊದಲು ಉತ್ತಮ ಶಿಕ್ಷಣ ನೀಡುವ ವಾತಾವರಣ ಕಲ್ಪಿಸಬೇಕು. ಅಲ್ಲದೆ ಪ್ರತಿ ಹಂತದಲ್ಲಿ ಕಲಿಯುವ ಘಟನೆಗಳು ಅವರ ಭವಿಷ್ಯದಲ್ಲಿ ಹೊಸ ಹೊಸ ತಿರುವುಗಳನ್ನು ಕಲ್ಪಿಸುತ್ತವೆ ಎಂದರು.

ಶ್ರೀಮಂತರು ದೇವರ ಕಾರ್ಯ, ಹರಕೆ ಸಲ್ಲಿಸುವ ಕಾರ್ಯಕ್ಕೆ ದುಂದು ವೆಚ್ಚ ಮಾಡುತ್ತಾರೆ. ದುರಸ್ತಿಗೆ ತಲುಪಿರುವ ಶಾಲೆಗಳ ಪುನರ್ ನಿರ್ಮಾಣ ಕೈಗೊಂಡಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿಸಲು ಸಾಧ್ಯ ಎಂದರು

ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಜಿಪಂ ಸದಸ್ಯೆ ಗಾಯತ್ರಿ ಗೌಡ ಮಾತನಾಡಿ, ಇಂದಿನ ಶಿಕ್ಷಣ ಅಂಕಗಳಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಮಕ್ಕಳಲ್ಲಿ ಇತರೆ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಅವರಲ್ಲಿ ಕ್ರೀಡಾ, ಮನರಂಜನಾತ್ಮಕ ಕೌಶಲ್ಯಗಳಿದ್ದರೂ ಅದನ್ನು ಗುರುತಿಸದ ಕಾರಣ ಅದು ಮೂಲೆ ಗುಂಪಾಗುತ್ತಿದೆ. ಪಾಲಕರಾದವರು ಇನ್ನಾದರೂ ಪ್ರತಿಭೆಗಳನ್ನು ಗುರುತಿಸಿ ನಮ್ಮ ಮಕ್ಕಳ ಭವಿಷ್ಯವನ್ನು ಉತ್ತಮ ಪಡಿಸಲು ಮುಂದಾಗಬೇಕು ಎಂದರು.

ಕಾರವಾರ ಎಜುಕೇಶನ್ ಸೊಸೈಟಿಯ ಎಸ್.ಪಿ.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಎಂ.ಪಿ.ಕಾಮತ್, ಎಸ್.ಎಸ್.ಕುಲಕರ್ಣಿ, ಎಂ.ಜಿ.ಹೆಗಡೆ, ಪತ್ರಕರ್ತ ಗಂಗಾಧರ್ ಹಿರೇಗುತ್ತಿ, ಅನ್ವರುದ್ದೀನ್, ಆರ್.ಎಸ್ ಹೆಗಡೆ, ಸಮಿದ್ ಕುಲಕರ್ಣಿ, ಅರುಣ ರಾಣೆ, ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News