×
Ad

ಅವ್ಯವಸ್ಥೆಗಳ ಆಗರವಾದ ಭಾಗಮಂಡಲ ಸರಕಾರಿ ಆಸ್ಪತ್ರೆ

Update: 2016-09-19 21:52 IST

 ಮಡಿಕೇರಿ, ಸೆ.19: ಭಾಗಮಂಡಲ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಪ್ರಭಾಕರ್ ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಆಸ್ಪತ್ರೆಗೆ ಗ್ರಾಮಸ್ಥರೊಂದಿಗೆ ದಿಢೀರ್ ಭೆೇಟಿ ನೀಡಿದ ಕವಿತಾ ಪ್ರಭಾಕರ್, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ವಾರಕ್ಕೆ ಎರಡು ಬಾರಿಯಾದರೂ ವೈದ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿಲ್ಲ. ವೈದ್ಯರ ಕೊರತೆಯಿಂದಾಗಿ ಗ್ರಾಮಸ್ಥರು ಚಿಕಿತ್ಸೆಗಾಗಿ ದೂರದ ಮಡಿಕೇರಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಜನ ಸಾಮಾನ್ಯರು ಆರೋಗ್ಯ ಕೇಂದ್ರಕ್ಕೆ ಆಗಮಿಸಿ ವೈದ್ಯರು ಇಲ್ಲದಿರುವುದನ್ನು ಗಮನಿಸಿ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ. ವೈದ್ಯರು ಯಾವಾಗ ಬರುತ್ತಾರೆ, ಯಾವಾಗ ಇರುತ್ತಾರೆ, ಯಾವಾಗ ಹೋಗುತ್ತಾರೆ ಎನ್ನುವುದೇ ಗ್ರಾಮಸ್ಥರ ಗಮನಕ್ಕೆ ಬರುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದರು.

ಅಶುಚಿತ್ವದ ಆಸ್ಪತ್ರೆ ಮತ್ತು ಗಬ್ಬೆದ್ದು ನಾರುತ್ತಿದ್ದ ಶೌಚಾಲಯದ ಬಗ್ಗೆ ಕವಿತಾ ಪ್ರಭಾಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀರಂಗಪ್ಪರನ್ನು ಸಂಪರ್ಕಿಸಿದ ಕವಿತಾ ಪ್ರಭಾಕರ್, ತಕ್ಷಣ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಈ ಸಂದಭರ್ ಸ್ಥಳಕ್ಕೆ ಬರಲು ಸಾಧ್ಯವಿಲ್ಲವೆಂದು ಆರೋಗ್ಯಾಧಿಕಾರಿ ಉಡಾಫೆೆ ಉತ್ತರ ನೀಡಿದರೆಂದು ಆರೋಪಿಸಿ ಜಿಪಂ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.

ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಆಸ್ಪತ್ರೆಯಿಂದ ಮರಳುವುದಿಲ್ಲವೆಂದು ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಶ್ರೀರಂಗಪ್ಪ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಆರೋಗ್ಯ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದ ಕವಿತಾ ಪ್ರಭಾಕರ್, ತಕ್ಷಣ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು. ಅಶುಚಿತ್ವದ ವಾತಾವರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಆರೋಗ್ಯಾಧಿಕಾರಿಗಳು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದೇ ಈ ಅವ್ಯವಸ್ಥೆಗಳಿಗೆ ಕಾರಣವೆಂದು ಆರೋಪಿಸಿದರು. ತಕ್ಷಣ ಅವ್ಯವಸ್ಥೆಗಳನ್ನು ಸರಿಪಡಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭ ಮಾತನಾಡಿದ ಆರೋಗ್ಯಾಧಿಕಾರಿ ಶ್ರೀರಂಗಪ್ಪ, ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಮುಂದೆ ಬರುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು. ಆದರೂ ಇರುವ ವೈದ್ಯರನ್ನು ಆದ್ಯತೆಯ ಮೇರೆಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News