×
Ad

ಸೆ.29ರಂದು ‘ಬಿ’ ರಿಪೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

Update: 2016-09-19 21:54 IST

ಮಡಿಕೇರಿ, ಸೆ.19: ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಸೆ.17ರಂದು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ನ ಬಗ್ಗೆ ನಗರದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್)ಜೆಎಂಎಫ್‌ಸಿ ನ್ಯಾಯಾಲಯ ಇಂದು ವಿಚಾರಣೆ ನಡೆಸಿತು. ಸೆ.29ರಂದು ವರದಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ.

ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅನ್ನಪೂರ್ಣೇಶ್ವರಿ, ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಿ’ ರಿಪೋರ್ಟ್ ಸಲ್ಲಿಕೆಯಾಗಿರುವುದನ್ನು ತಿಳಿಸಿದರು. ನಂತರ ದೂರುದಾರರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿ ಇದೇ ಸೆ.29ರ ದಿನವನ್ನು ಗೊತ್ತು ಮಾಡಿದರು.

ಈ ಹಿಂದೆ ನ್ಯಾಯಾಲಯ ಸಿಐಡಿ ಅಧಿಕಾರಿಗಳು ಸೆ.19ರೊಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ತಿಳಿಸಿತ್ತು. ಆದರೆ ಸಿಐಡಿ ತಂಡ ಎರಡು ದಿನ ಮುಂಚಿತವಾಗಿ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಪ್ರಕರಣದಲ್ಲಿ ದೂರುದಾರರಾಗಿರುವ ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಪ್ರಸನ್ನ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿ’ ರಿಪೋರ್ಟ್‌ನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ದೂರುದಾರರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲ ಅಮೃತ್ ಸೋಮಯ್ಯ ಮಾತನಾಡಿ, ಆರೋಪಗಳನ್ನು ಸಾಬೀತು ಪಡಿಸುವ ಸಾಕ್ಷ ಮತ್ತು ಆಧಾರಗಳು ಇಲ್ಲವೆನ್ನುವ ಕಾರಣ ನೀಡಿ ಸಿಐಡಿ ಅಧಿಕಾರಿಗಳು ಸುಮಾರು ಆರುನೂರು ಪುಟಗಳ ‘ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ ಎಂದರು. ವರದಿಯ ಪ್ರತಿ ಇನ್ನಷ್ಟೇ ದೊರಕಬೇಕಿದ್ದು, ಪರಿಶೀಲನೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಸೋಮವಾರ ಪ್ರಕರಣದ ವಿಚಾರಣೆ ವೇಳೆ ಕುತೂಹಲಭರಿತರಾಗಿದ್ದ ಸಾರ್ವಜನಿಕರು ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News