×
Ad

ಶಿಕ್ಷಣದಿಂದ ಸ್ವತಂತ್ರ, ಸಂಘಟನೆಯಿಂದ ಶಕ್ತಿ ಎಂಬ ಮಾತು ಶಿಕ್ಷಕರಿಗೆ ಅನ್ವರ್ಥ: ಶಾಸಕ ಮಧು ಬಂಗಾರಪ್ಪ

Update: 2016-09-19 21:59 IST

ಸೊರಬ, ಸೆ.19: ಶಿಕ್ಷಣದಿಂದ ಸ್ವತಂತ್ರ, ಸಂಘಟನೆಯಿಂದ ಶಕ್ತಿ ಎಂಬ ಮಾತು ಶಿಕ್ಷಕರಿಗೆ ಅನ್ವರ್ಥವಾಗುತ್ತದೆ. ಶಿಕ್ಷಕರಿಗೆ ಸಮಾಜದಲ್ಲಿ ಸಿಗುವ ಗೌರವ ಬೇರಿನ್ನಾವ ಇಲಾಖೆಯ ಅಧಿಕಾರಿಗಳಿಗೆ ಸಿಗಲಾರದು ಎಂದು ಶಾಸಕ ಮಧು ಬಂಗಾರಪ್ಪತಿಳಿಸಿದರು.

ಆನವಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಜಯಪ್ಪರಂಗಮಂದಿರದಲ್ಲಿ ಶ್ರೀ ಗಜಾನನ ಶಿಕ್ಷಕರ ಪತ್ತಿನ ಸಹಕಾರಿ ಸಂಘದ 75 ನೆ ವರ್ಷದ ವಜ್ರ ಮಹೋತ್ಸವ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಂಘ ಸಂಸ್ಥೆ ಒಂದೇ ಬಾರಿಗೆ ದೊಡ್ಡದಾಗಲು ಸಾಧ್ಯವಿಲ್ಲ. ಸಸಿಯನ್ನು ಪೋಷಿಸಿ ಸಮರ್ಥವಾಗಿ ಬೆಳೆಸಿದಾಗ ಹೆಮ್ಮರವಾಗಿ ಬೆಳೆದು ಸಾಕಷ್ಟು ಜನರಿಗೆ ನೆರಳು ನೀಡುತ್ತದೆ. ರೈತರು, ಮಧ್ಯಮ ವರ್ಗದವರು ಹಾಗೂ ಜನಸಾಮಾನ್ಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸರಕಾರಗಳಿಗಿಂತ ಸಹಕಾರಿ ಸಂಘಗಳೇ ಹೆಚ್ಚು ಬೆಂಬಲವಾಗಿ ನಿಂತಿವೆ ಎಂದರು.

 ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಜಾತಿ ರಾಜಕಾರಣ, ಲಿಂಗ ಭೇದವನ್ನು ದೂರವಿಟ್ಟು ಸಂಘಟಿಸಿದಾಗ ಮಾತ್ರ ಸಹಕಾರಿ ಸಂಘಗಳು ಯಶಸ್ವಿಯಾಗಲು ಸಾಧ್ಯ. ಬಹಳಷ್ಟು ಸಹಕಾರಿ ಸಂಘಗಳು ಸೇವೆಗಾಗಿ ಜನ್ಮ ತಳೆದಿವೆಯೇ ಹೊರತು, ಹಣ ಮಾಡಲು ಅಲ್ಲ. ಜಿಲ್ಲಾದ್ಯಂತ ಬರ ಎದುರಾಗುತ್ತಿದೆ. 300 ಕೋಟಿಗಿಂತಲೂ ಹೆಚ್ಚು ಬೆಳೆ ಹಾನಿಯಾಗಿದೆ. ರೈತರ ಹಾಗೂ ಬ್ಯಾಂಕಿನ ನಡುವೆ ನಂಬಿಕೆಯೇ ಆಧಾರ. ಇಲ್ಲಿಯವರೆಗೆ ಬ್ಯಾಂಕ್ ವತಿಯಿಂದ ಒಬ್ಬನೇ ರೈತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ರೈತರಿಗೆ ಸಾಲ ಕೊಡಬಾರದೆಂದು ದುಷ್ಟ ಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಬ್ಯಾಂಕ್ ಮಾತ್ರ ರೈತ ಹಾಗೂ ಮಧ್ಯಮ ವರ್ಗದ ಜನರ ಹಿತ ಕಾಪಾಡುತ್ತಿದ್ದು ಕೃಷಿಕ ಕುಟುಂಬದವರ ನೆರವಿಗೆ ಬದ್ಧವಾಗಿರುತ್ತೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಚ್. ಸಿದ್ದಪ್ಪವಹಿಸಿದ್ದರು.

ಪ್ರಕಾಶ್ ಮಡ್ಲೂರು ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ ವೀರೇಶ್ ಕೊಟಗಿ, ಶಿವಲಿಂಗೇಗೌಡ, ತಾಲೂಕು ಪಂಚಾಯತ್ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ಹನುಮಂತಪ್ಪ, ಅಂಜಲಿ ಸಂಜೀವ್, ಬಿಇಒ ಆಂಜನೇಯ, ಸಂಘದ ಅಧ್ಯಕ್ಷ ಕೆ.ಸಿ. ಶಿವಕುಮಾರ್, ಸಂಪತ್ ಕುಮಾರ್, ಮಹಾಬಲೇಶ್ವರ ಹೆಗಡೆ, ಎಚ್.ಎಚ್ ಬಸವರಾಜಪ್ಪ, ಹಾಲೇಶ್ ನವುಲೆ, ಚಂದ್ರಪ್ಪಜಾಲಗಾರ್, ಹುನುವಳ್ಳಿ ನಾಗರಾಜ, ಮಂಜಪ್ಪ, ನಾಗಪ್ಪ, ನಂದೀಶ, ಅನುರಾಧಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News