ಕ್ಷುಲ್ಲಕ ಕಾರಣಗಳಿಗೆ ವೆದ್ಯರ ದೂಷಣೆ ಸಲ್ಲದು: ಡಾ. ಪ್ರಭಾಕರ್
ಸೊರಬ, ಸೆ.19: ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ವೈದ್ಯರನ್ನು ದೂಷಣೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಪ್ರಭಾಕರ್ ನುಡಿದರು.
ಪಟ್ಟಣದ ಸುಧನ್ವ ಮತ್ತು ಸುಧನ್ಯ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಲೂಕು ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈದ್ಯರ ಮೇಲೆ ಹಲ್ಲೆ ಹಾಗೂ ಅವರ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆಯು ದೇಶದ 7 ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿದ್ದು, ವೈದ್ಯರು ಮತ್ತು ವೈದ್ಯರಿಗೆ ಸಂಬಂಧ ಪಟ್ಟ ಆಸ್ತಿಗೆ ಹಾನಿವುಂಟು ಮಾಡಿದರೆ ಕಾಯ್ದೆಯನ್ವಯ ಕಠಿಣ ಶಿಕ್ಷಗೊಳಪಡಿಸಬಹುದಾಗಿದೆ. ಅಹಿತಕರ ಘಟನೆಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಯವರು ಕೂಡಲೇ ರಕ್ಷಣೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಯಾರೂ ಇಂತಹ ದುಷ್ಕೃತ್ಯಕ್ಕೆ ಮುಂದಾಗಬಾರದು. ಅಂತಹ ತಪ್ಪುಗಳೇನಾದರು ವೈದ್ಯರಿಂದ ಕಂಡು ಬಂದಲ್ಲಿ ಕಾನೂನು ರೀತಿ ನ್ಯಾಯಾಲಯಗಳಲ್ಲಿ ಬಗೆಹರಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ವೈದ್ಯರ ದೃಷ್ಟಿಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಎಂಬ ಭೇದ-ಭಾವವಿಲ್ಲದೆ ಎಲ್ಲರೂ ಸಮಾನರು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಅಗತ್ಯ ಸಿಬ್ಬಂದಿ ನೇಮಕ, ಉಳಿಯಲು ವೈದ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸರಕಾರ ಚಿಂತನೆ ನಡೆಸಿ ನಂತರ 2 ವರ್ಷ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸೇವೆ ಕಡ್ಡಾಯಗೊಳಿಸಬೇಕು. ‘ವೈದ್ಯರ ನಡಿಗೆ ಹಳ್ಳಿ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಐಎಂಎ ವತಿಯಿಂದ ಹಮ್ಮಿಕೊಂಡಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಬಗ್ಗೆ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸುವುದು ಮತ್ತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧಕ್ಷ ಡಾ. ಪ್ರಭಾಕರ್, ಉಪಾಧ್ಯಕ್ಷ ಡಾ. ಹರೀಶ್ ಹಾಗೂ ಜಿಲ್ಲಾ ಸಂಯೋಜಕ ಡಾ. ಮಹಾಬಲೇಶ್ ಅವರನ್ನು ತಾಲೂಕು ಸಂಘದ ವತಿಯಿಂದ ಸನ್ಮಾನಿಸಲಾಯಿತು.