×
Ad

ಪ್ರತಿಭಾನ್ವಿತರು ಸಹಪಾಠಿಗಳಿಗೆ ಮಾರ್ಗದರ್ಶನ ನೀಡಲಿ: ಪರಮೇಶ್ವರಪ್ಪ

Update: 2016-09-19 22:03 IST

 ಚಿಕ್ಕಮಗಳೂರು, ಸೆ.19: ಅತಿಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರೂ ಪ್ರತಿಭಾವಂತರಾಗಲು ಸಹಕಾರ ನೀಡಬೇಕು ಎಂದು ಜಿಲ್ಲಾ ಶಿಕ್ಷಣ ಇಲಾಖೆ ನೌಕರರ ಡಾ. ರಾಧಾಕೃಷ್ಣನ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಲ್.ಜಿ. ಪರಮೇಶ್ವರಪ್ಪ ಸಲಹೆ ಮಾಡಿದರು.

ನಗರದ ಬಸವನಹಳ್ಳಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆೆಯಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪ್ರತಿಭೆ ಎಲ್ಲ ಮಕ್ಕಳಲ್ಲೂ ಸುಪ್ತವಾಗಿ ಅಡಗಿರುತ್ತದೆ. ಕೆಲವು ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ಓದುವ ಮೂಲಕ ಪ್ರತಿಭಾವಂತರಾಗುತ್ತಾರೆ ಎಂದ ಅವರು, ಇಂತಹ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೂ ತಾವು ಕಲಿತುದ್ದನ್ನು ಹೇಳಿಕೊಟ್ಟರೆ ಅವರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸಂಘವು ಪ್ರಸಕ್ತ ಸಾಲಿನಲ್ಲಿ 1.36 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಈ ಹಣದಲ್ಲಿ ಸದಸ್ಯರಿಗೆ ಶೇ.5 ರಷ್ಟು ಡಿವಿಡೆಂಡ್ ನೀಡಲಾಗುವುದು. ಶೇರುದಾರರಿಗೆ ನೀಡಲಾಗುವ ಸಾಲದ ಮೊತ್ತವನ್ನು 25 ರಿಂದ 40 ಸಾವಿರಕ್ಕೆ ಹೆಚ್ಚಿಸಲಾಗುವುದು. ಸಂಘದಿಂದ ಶಿಕ್ಷಕರಿಗೆ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.

  ಸಂಘದ ಸಂಸ್ಥಾಪಕ ಅಬ್ದುಲ್ ಮಜೀದ್ ಮಾತನಾಡಿ, ವಿದ್ಯಾರ್ಥಿಗಳು, ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸಹಕಾರ ಮತ್ತು ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು.

  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಇ. ಲೋಕೇಶ್ವರಾಚಾರ್ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಎಲ್.ಸಿ. ಪುಟ್ಟಸ್ವಾಮಿ ಅವರನ್ನು ಸಮಾರಂಭದಲ್ಲಿ ಸಂಘದಿಂದ ಸನ್ಮಾನಿಸಲಾಯಿತು.

  ಸಂಘದ ನಿರ್ದೇಶಕ ಕೆ.ಚಂದ್ರಶೇಖರಪ್ಪ, ಎಚ್.ಎನ್. ಹನುಮಂತಪ್ಪ, ಬಿ.ಆರ್.ಕುಮಾರಪ್ಪ, ಮುಹಮ್ಮದ್ ಇಸ್ಮಾಯೀಲ್ ಉಪಸ್ಥಿತರಿದ್ದರು. ಆರ್.ರವಿ ಕಾರ್ಯಕ್ರಮವನ್ನು ನಿರೂಪಿಸಿದರು. ಆರ್.ಬಸವಕುಮಾರ್ ಸ್ವಾಗತಿಸಿದರು. ಲೋಕೇಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News