ಸರಕಾರಗಳು ರೆತರನ್ನು ಹಗಲು ದರೋಡೆ ಮಾಡುತ್ತಿವೆ: ಕೋಡಿಹಳ್ಳಿ
ಕಡೂರು, ಸೆ.19: ತೆಂಗು, ಕೊಬ್ಬರಿ ಹಾಗೂ ಅಡಿಕೆ ಬೆಳೆಗಳಿಗೆ ಬೆಂಬಲ ದರ ನಿಗದಿಗೊಳಿಸುವ ಮೂಲಕ ರೈತರ ಬೆಳೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಖರೀದಿಸಬೇಕೆಂದುಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಕಡೂರಿನಿಂದ ವಿಧಾನಸೌಧದವರೆಗೆ ಬೈಕ್ ರ್ಯಾಲಿ ಆರಂಭಿಸಿದರು.
ರೈತರಿಗಿಂತ ಅತ್ಯಧಿಕ ಪೊಲೀಸರು ಸರ್ಪಕಾವಲಿದ್ದು, ಬೈಕ್ ರ್ಯಾಲಿ ಪ್ರಾರಂಭವಾಗಿ ಕಡೂರು ಕೃಷಿ ಮಾರುಕಟ್ಟೆಯ ಗೇಟಿಗೆ ಆಗಮಿಸುತ್ತಿದ್ದಂತೆ ರ್ಯಾಲಿಯನ್ನು ತಡೆದ ಪೊಲೀಸರು, ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಮುಖಂಡರು ಹಾಗೂ 200ಕ್ಕೂ ಹೆಚ್ಚು ರೈತರನ್ನು ಬಂಧಿಸಿ ರ್ಯಾಲಿಯನ್ನು ಹತ್ತಿಕ್ಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಅಡಿಕೆ ಬೆಲೆ ಕುಸಿದಿದೆ. ಭಾರತ ಸರಕಾರ ಅಡಿಕೆಗೆ ಬೆಂಬಲ ಬೆಲೆ ನಿಷೇಧಿಸಿದೆ. ಆ.10 ರಂದು ಬೆಂಬಲ ಬೆಲೆಗಾಗಿ ತಿಪಟೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಗುಬ್ಬಿ ಸಮೀಪ ಪಾದಯಾತ್ರೆ ಆಗಮಿಸುತ್ತಿದ್ದಂತೆ ಸಚಿವರಾದ ಜಯಚಂದ್ರ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್‌ರವರು ಆಗಮಿಸಿ ಪಾದಯಾತ್ರೆ ಬೇಡ, ಸರ್ವಪಕ್ಷಗಳ ಸಭೆ ಕರೆಯಲು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂಬ ಭರವಸೆ ನೀಡಿದ್ದರು.
ಇದರ ಮೇರೆಗೆ ಪಾದಯಾತ್ರೆ ಕೈಬಿಡಬೇಕಾಯಿತು. ಸರ್ವಸದಸ್ಯರ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್‌ಕುಮಾರ್‌ರವರು ಪ್ರಧಾನಮಂತ್ರಿ ಜೊತೆ ಚರ್ಚಿಸಿ ದರ ನಿಗದಿಗೊಳಿಸುವ ಭರವಸೆ ನೀಡಿದರು. ಈ ಭರವಸೆಯು ಸುಳ್ಳಾಯಿತು. ಕೇಂದ್ರ ಸರಕಾರ ನೌಕರರಿಗೆ ಶೇ. 23 ವೇತನ ಹೆಚ್ಚಿ
ಸುತ್ತದೆ. ಆದರೆ ಈ ಸರಕಾರಗಳಿಗೆ ರೈತರ ಬಗ್ಗೆ ಕಾಲಜಿ ಇಲ್ಲವಾಗಿದೆ ಎಂದು ಹೇಳಿದರು. ಕಳೆದ 30 ವರ್ಷಗಳಿಂದ ತೆಂಗು, ಕೊಬ್ಬರಿ ಬೆಲೆ ಒಂದೇ ರೀತಿ ಇದೆ. ಸರಕಾರ ನೌಕರರ ವೇತನವನ್ನು 5 ವರ್ಷಕ್ಕೊಮ್ಮೆ ಹೆಚ್ಚಿಸಲಿದೆ. ರೈತರು ಬೆಳೆದ ಬೆಳೆಗಳ ದರ ನಿಗದಿ ಮಾಡಲು ಯಾವುದೇ ಸರಕಾರ ಪ್ರಯತ್ನಿಸುವುದಿಲ್ಲ. ರೈತರನ್ನು ಸರಕಾರಗಳು ಹಗಲು ದರೋಡೆ ಮಾಡುತ್ತಿವೆ. ರೈತರು ಬೀದಿಗೆ ಇಳಿಯಬೇಕಾಗಿದೆ. ಈಗ ಪೊಲೀಸರ ಮೂಲಕ ಬೈಕ್ ರ್ಯಾಲಿಯನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ. ನಮ್ಮದು ಪೊಲೀಸರ, ರೈತರ ಮಧ್ಯೆ ಹೋರಾಟ ಅಲ್ಲ ಎಂದರು.
ಕಾವೇರಿ ವಿಷಯದ ಬಗ್ಗೆ ಪ್ರಧಾನಿ ಮಧ್ಯ ಪ್ರವೇಶ ಮಾಡಬೇಕಿದೆ. ಮಾತುಕತೆಯ ಮೂಲಕ ಈ ಸಮಸ್ಯೆ ಬಗೆಹರಿಯಬೇಕಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಿ ನೀರಿನ ಹಂಚಿಕೆ ಮಾಡಬೇಕಿದೆ. ಎಲ್ಲ ಸಮಸ್ಯೆ ನಿವಾರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಫಲರಾಗಿದ್ದಾರೆ. ಪೊಲೀಸರ ಬಲವನ್ನು ಪುಂಡರಿಗೆ ತೋರಿಸಲಿ. ನಾವುಗಳು ಹೊಲಗಳಲ್ಲಿ ಕೆಲಸ ಮಾಡುವವರು ಬಸ್ಸಿಗೆ ಬೆಂಕಿ ಹಚ್ಚುವ ಕೆಲಸ ನಮ್ಮದಲ್ಲ. ಮುಂದೆಯೂ ಹೋರಾಟ ಮುಂದುವರಿಯಲಿದೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ಕೊಪ್ಪಳದ ಹನುಮಂತಪ್ಪ, ತಿಪಟೂರಿನ ಸತೀಶ್, ಮಹೇಶ್ವರಪ್ಪ, ನಿರಂಜನಮೂರ್ತಿ, ಜಗದೀಶ್, ಗಂಗಾಧರಪ್ಪ, ಸಿಂಗಟಗೆರೆ ನಾಗರಾಜು, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್ ಹಾಗೂ ಜೆಡಿಎಸ್‌ಕಡೂರು ಘಟಕದ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್, ಬಿದರೆ ಜಗದೀಶ್‌ಮತ್ತಿತರರು ಉಪಸ್ಥಿತರಿದ್ದರು.