ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಸ್ಥಾಪನೆಗೆ ಪರಿಶೀಲಿಸಿ ಸೂಕ್ತ ಕ್ರಮ
ಶಿವಮೊಗ್ಗ, ಸೆ. 19: ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗ (ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ) ವಿಭಜಿಸಿ ಶಿವಮೊಗ್ಗದಲ್ಲಿ ಮತ್ತೊಂದು ವಿಭಾಗ ರಚಿಸಬೇಕೆಂದು ಮಲೆನಾಡಿಗರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಈ ನಡುವೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಶಿವಮೊಗ್ಗದಲ್ಲಿ ಪ್ರತ್ಯೇಕ ಕೆಎಸ್ಸಾರ್ಟಿಸಿ ವಿಭಾಗ ತೆರೆಯುವ ಕುರಿತಂತೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದಾವಣಗೆರೆ ವಿಭಾಗ ವಿಭಜಿಸಿ ಹೊಸ ವಿಭಾಗ ರಚನೆ ಮಾಡಬೇಕೆಂಬ ಪ್ರಸ್ತಾಪವಿದೆ. ಸ್ಥಳೀಯ ಅವಕಾಶ ಹಾಗೂ ಭೌಗೋಳಿಕ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಶಿವಮೊಗ್ಗದಲ್ಲಿ ಹೊಸ ವಿಭಾಗ ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ. ಸೋಮವಾರ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಜೆನ್‌ನರ್ಮ್ ಯೋಜನೆಯಡಿ ನಿರ್ಮಿಸಲಾಗಿರುವ ಸರಕಾರಿ ಸಿಟಿ ಬಸ್ ಡಿಪೋ ಉದ್ಘಾಟನೆ ನಡೆಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಭದ್ರಾವತಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಭದ್ರಾ ನದಿ ಹಾದು ಹೋಗಿದೆ. ಸುರಕ್ಷತೆಯ ದೃಷ್ಟಿಯಿಂದ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಬಸ್ ನಿಲ್ದಾಣದ ಬಳಿ ಬಸ್‌ಗಳ ಸಂಚಾರಕ್ಕೆ ಅಡೆತಡೆಯಾಗಿರುವ ಹೋಟೆಲ್ ತೆರವಿಗೂ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿ ಖಾಲಿಯಿರುವ ಚಾಲಕ ಹಾಗೂ ನಿರ್ವಾಹಕರ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಇದೇ ಸಂದಭರ್ದಲ್ಲಿ ಅವರು ಹೇಳಿದರು. ಇದಕ್ಕೂ ಮುನ್ನ ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿಗೌಡರವರು ಪ್ರಾಸ್ತಾವಿಕವಾಗಿ ಮಾತನಾಡಿ, ದಾವಣಗೆರೆ ವಿಭಾಗ ವಿಭಜಿಸಿ ಶಿವಮೊಗ್ಗದಲ್ಲಿಯೇ ಪ್ರತ್ಯೇಕ ಕೆಎಸ್ಸಾರ್ಟಿಸಿ ವಿಭಾಗ ಸ್ಥಾಪನೆ ಮಾಡಬೇಕು. ಇದಕ್ಕೆ ಶಿವಮೊಗ್ಗವು ಅರ್ಹವಾಗಿದೆ. ಹಾಗೆಯೇ ಭದ್ರಾವತಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿ ಹಾಗೂ ಹೋಗಿರುವ ಭದ್ರಾ ನದಿಯ ಬಳಿ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಸಚಿವರಿಗೆ ಆಗ್ರಹಿಸಿದರು. ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಬಿ.ಬಾನುಪ್ರಕಾಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಸೇರಿದಂತೆ ಸ್ಥಳೀಯ ನಗರಸಭೆ, ಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದವರೆಗೆ ಜೆನ್ ನರ್ಮ್ ಬಸ್ ಓಡಿಸಲು ಅವಕಾಶ ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದವರೆಗೆ ಜೆನ್ ನರ್ಮ್ ಯೋಜನೆಯ ಸರಕಾರಿ ಸಿಟಿ ಬಸ್ ಓಡಿಸಲು ಅವಕಾಶವಿದೆ.
ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯವು ಜೆನ್‌ನರ್ಮ್ ಯೋಜನೆಯಡಿ ಸರಕಾರಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸಿದೆ. 1 ಲಕ್ಷ ಮೇಲ್ಪಟ್ಟು ಜನಸಂಖ್ಯೆಯಿರುವ ನಗರ-ಪಟ್ಟಣ ಪ್ರದೇಶಗಳಲ್ಲಿ ಸರಕಾರಿ ಸಿಟಿ ಬಸ್ ಓಡಿಸಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಹಲವು ನಗರಗಳಲ್ಲಿ ಸರಕಾರಿ ಸಿಟಿ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಸರಕಾರಿ ಸಿಟಿ ಬಸ್ ಸಂಚಾರದಿಂದ ಪ್ರಯಾಣಿಕರಿಗೆ ಕಡಿಮೆ ಪ್ರಯಾಣ ದರದಲ್ಲಿ ಉತ್ತಮ ಸೇವೆ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಜೆನ್‌ನರ್ಮ್ ಯೋಜನೆಯಡಿ ಮತ್ತಷ್ಟು ಸರಕಾರಿ ಬಸ್‌ಗಳನ್ನು ರಾಜ್ಯಾದ್ಯಂತ ಓಡಿಸಲಾಗುವುದು ಎಂದು ಸಚಿವರು ಹೇಳಿದರು.
ಭ ದ್ರಾವತಿ ಪಟ್ಟಣದಲ್ಲಿ 35 ಸರಕಾರಿ ಸಿಟಿ ಬಸ್ ಓಡಿಸಲು ಅನುಮತಿ ನೀಡಲಾಗಿದ್ದು, ಪ್ರಸ್ತುತ 10 ಬಸ್‌ಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸರಕಾರಿ ಸಿಟಿ ಬಸ್‌ಗಳ ಓಡಾಟಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಸರಕಾರಿ ನಗರ ಸಾರಿಗೆ ಸೇವೆಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆಎಸ್ಸಾರ್ಟಿಸಿ ಸಂಸ್ಥೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಿಸುಮಾರು 130 ಕ್ಕೂ ಅಧಿಕ ಪ್ರಶಸ್ತಿಗಳು ಬಂದಿವೆ. ಇದೊಂದು ದಾಖಲೆಯಾಗಿದೆ. ಕೆಎಸ್ಸಾರ್ಟಿಸಿ ಸಂಸ್ಥೆಯ ನೌಕರರ ಕೆಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಉಳಿದವುಗಳನ್ನು ಹಂತಹಂತವಾಗಿ ಈಡೇರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ರಾಮಲಿಂಗಾರೆಡ್ಡಿ ಸಾರಿಗೆ ಸಚಿವರು
554 ಲಕ್ಷ ರೂ. ವೆಚ್ಚದಲ್ಲಿ ಬಸ್ ಡಿಪೋ ನಿರ್ಮಾಣ: ಭದ್ರಾವ ತಿ ಪಟ್ಟಣದಲ್ಲಿ ಜೆನ್ ನರ್ಮ್ ಯೋಜನೆಯಡಿ 35 ಸರಕಾರಿ ಸಿಟಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಪ್ರಥಮ ಹಂತದಲ್ಲಿ 10 ಬಸ್‌ಗಳು ಬಿಡುಗಡೆಯಾಗಿದ್ದು, ಸಂಚಾರ ನಡೆಸುತ್ತಿವೆ. ಯೋಜನೆಯ ನಿಯಮದಂತೆ ಪಟ್ಟಣದಲ್ಲಿ 2 ಎಕರೆ 10 ಗುಂಟೆ ವಿಸ್ತೀರ್ಣದಲ್ಲಿ ಸರಕಾರಿ ಸಿಟಿ ಬಸ್‌ಗಳಿಗೆ ಪ್ರತ್ಯೇಕ ಡಿಪೋ ನಿರ್ಮಾಣ ಮಾಡಲಾಗಿದೆ. ಡಿಪೋದಲ್ಲಿ ಆಡಳಿತ ಕಚೇರಿ, ನಿರ್ವಹಣೆ, ಉಪಹಾರ ಗೃಹ, ಸಿಬ್ಬಂದಿ ವಿಶ್ರಾಂತಿ ಗೃಹ ಸೇರಿದಂತೆ ಇನ್ನಿತರೆ ಸೌಲಭ್ಯ ಸಿಗಲಿವೆೆ.