ಗುಣಮಟ್ಟದ ಚಾಲಕರ ನೇಮಕಾತಿಗೆ ಆದ್ಯತೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು, ಸೆ.19: ಅಪಘಾತ ಕಡಿಮೆಯಾಗಲು ಗುಣಮಟ್ಟದ ಚಾಲಕರುಗಳ ಅವಶ್ಯವಿದ್ದು, ಈ ಹಿನ್ನಲೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಅವರು ಸೋಮವಾರ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನೂತನವಾಗಿ ನಿರ್ಮಿಸಿರುವ ಚಾಲಕರ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಕಳಸಾಪುರ ಬಸ್ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸಾರಿಗೆ ನಿಗಮವು ನಷ್ಟದಲ್ಲಿದ್ದರೂ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆಯನ್ನು ನೀಡುತ್ತಿದೆ. ರಾಜ್ಯದಲ್ಲಿ ಒಟ್ಟು 7 ತರಬೇತಿ ಕೇಂದ್ರಗಳಿವೆ. ಚಿಕ್ಕಮಗಳೂರಿನಲ್ಲಿ 8ನೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, 8 ನೆ ತರಗತಿ ಓದಿದವರಿಗೆ ಮಾತ್ರ ತರಬೇತಿ ನೀಡಬೇಕೆಂಬ ನಿಯಮ ರಾಜ್ಯದಲ್ಲಿದ್ದು, ಇದರಿಂದ ಚಾಲಕರ ಕೊರತೆ ಉದ್ಭವಿಸಿದೆ ಎಂದ ಅವರು ವಿದ್ಯಾರ್ಹತೆ ಸಡಿಲಗೊಳಿಸುವ ಚಿಂತನೆಯನ್ನು ಸರಕಾರ ನಡೆಸಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ಮುಖ್ಯವಾಗಿದೆ. ಇದಕ್ಕೆ ಪೂರಕವಾಗಿ ಚಾಲಕರ ತರಬೇತಿ ಹಾಗೂ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲಾಗಿದೆ. ಉತ್ತಮ ಚಾಲನೆ ಹಾಗೂ ಸುರಕ್ಷತೆ ಚಾಲನೆ ಮಾಡಿದವರಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಮಲೆನಾಡು ಭಾಗದಲ್ಲಿ ಮೂಡಿಗೆರೆ ಡಿಪೋಗೆ ಹೊಸ ಬಸ್ಸುಗಳನ್ನು ನೀಡಬೇಕು ಎಂದರು. ಶಾಸಕ ಸಿ.ಟಿ ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ತರಬೇತಿಗಾಗಿ ಹಾಸನಕ್ಕೆ ಹೋಗಬೇಕಿತ್ತು. ಆದರೆ ನಗರದಲ್ಲಿ ತರಬೇತಿ ಕೇಂದ್ರ ಮಾಡಿರುವುದು ಅನುಕೂಲವಾಗಿದೆ. ಕೆಎಸ್ಸಾರ್ಟಿಸಿ ಸಂಸ್ಥೆಯನ್ನು ಇನ್ನಷ್ಟು ವೃತ್ತಿಪರ ಹಾಗೂ ಜನಸ್ನೇಹಿಯಾಗಿ ರೂಪಿಸಬೇಕು ಎಂದರು. ಬಂದ್ ಹಾವಳಿಗಳಿಂದ ಕೆಎಸ್ಸಾರ್ಟಿಸಿ ಬಸ್ಸುಗಳು ಹಾಳಾಗುತ್ತಿವೆ. ಹೋರಾಟಗಾರರ ಮನಸ್ಥಿತಿಯನ್ನು ಬದಲಾಯಿಸುವ ಆವಶ್ಯಕತೆ ಇದೆ. ವಾರದ ಕೊನೆಯ ದಿನಗಳಲ್ಲಿ ಜಿಲ್ಲೆಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಇವರ ಅನುಕೂಲತೆಗೆ ಹೆಚ್ಚುವರಿ ಡಿಲಕ್ಸ್ ಬಸ್ಸುಗಳನ್ನು ಬಿಡಬೇಕು. ವರ್ಷದಲ್ಲಿ ಎರಡು ಬಾರಿ ಸಾರಿಗೆ ಅದಾಲತ್ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಪ್ರೇಮಾ ಮಂಜುನಾಥ್, ತೇಗೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಕಳಸಾಪುರ ಗ್ರಾಪಂ ಅಧ್ಯಕ್ಷೆ ಎಸ್.ಡಿ. ಶಶಿಕಲಾ ಲೋಕೇಶ್, ತಾಪಂ ಸದಸ್ಯೆ ಕುಸುಮಾ ದೊಡ್ಡೇಗೌಡ, ತಾಪಂ ಅಧ್ಯಕ್ಷ ಈ. ಮಹೇಶ್, ಗ್ರಾಪಂ ಸದಸ್ಯರಾದ ಜಯಣ್ಣ, ಚಂದ್ರ, ನರೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು