×
Ad

ಬ್ಯಾರೀಸ್ ಟ್ರಸ್ಟ್‌ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2016-09-19 22:19 IST

ಮಡಿಕೇರಿ ಸೆ.19: ಕೊಡಗು ಬ್ಯಾರೀಸ್ ಟ್ರಸ್ಟ್ ಹಾಗೂ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಆಸ್ಪತ್ರೆಯ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ನಗರದ ಕ್ರೆಸೆಂಟ್ ಶಾಲೆಯಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ತೋರಬೇಕೆಂದು ಸಲಹೆ ನೀಡಿದರು.

ಆರು ತಿಂಗಳಿಗೊಮ್ಮೆ ತಪ್ಪದೇ ಆರೋಗ್ಯವನ್ನು ಪರೀಕ್ಷಿಸಿಕೊಂಡಲ್ಲಿ ಅಪಾಯಕಾರಿ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆರೋಗ್ಯ ಪರೀಕ್ಷಿಸಿಕೊಳ್ಳುವಲ್ಲಿ ಮುಸ್ಲಿಂ ಮಹಿಳೆಯರು ತೋರುತ್ತಿರುವ ಕಾಳಜಿ ಮೆಚ್ಚುವಂತಹದ್ದು ಎಂದು ಅಭಿಪ್ರಾಯಪಟ್ಟ ದೇವಯ್ಯ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬ್ಯಾರೀಸ್ ಟ್ರಸ್ಟ್ ಹಮ್ಮಿಕೊಂಡಿರುವ ಶಿಬಿರ ಶ್ಲಾಘನಾರ್ಹವೆಂದರು.

ಸ್ತ್ರೀರೋಗ ತಜ್ಞರಾದ ಡಾ.ಶ್ರೀವಿದ್ಯಾ ಮಾತನಾಡಿ ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಕೆವಿಜಿ ಆಸ್ಪತ್ರೆಯ ಆರೋಗ್ಯ ಶಿಬಿರದ ವ್ಯವಸ್ಥಾಪಕ ಬಿ.ಚಂದ್ರಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಮಡಿಕೇರಿಯಲ್ಲಿ ಪ್ರತ್ಯೇಕ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವುದಾಗಿ ತಿಳಿಸಿದರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ ಬಿ.ಎ.ಶಂಸುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆವಿಜಿ ಆಸ್ಪತ್ರೆಯ ಡಾ.ವಿನಯ್, ಡಾ. ಮುಹಮ್ಮದ್ ಫಾರುಕ್, ಶ್ರೀ ವಿದ್ಯಾ, ಡಾ. ಪಲ್ಲವಿ, ಡಾ. ಕಾರ್ತಿಕಾ ರಾಜೀವ್, ಡಾ. ಪಾರ್ಥಿವ್ ಪಟೇಲ್, ಡಾ. ಗಾಯತ್ರಿ, ಡಾ. ರಾಹುಲ್ ಶರ್ಮ ಹಾಗೂ ಡಾ. ರಾಕೇಶ್ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.

ಮಕ್ಕಳ ರೋಗ, ಕಿವಿ, ಮೂಗು, ಗಂಟಲು, ಚರ್ಮ ರೋಗ, ಸ್ತ್ರೀರೋಗ ಸೇರಿದಂತೆ ವಿವಿಧ ವಿಭಾಗಗಳ ವ್ಯವಸ್ಥೆಯನ್ನು ಶಿಬಿರದಲ್ಲಿ ಮಾಡಲಾಗಿತ್ತು. ಸುಮಾರು 200 ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಆಸ್ಪತ್ರೆಯ ಸೂಪರ್ ವೈಸರ್ ದಯಾನಂದ, ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಜಿ.ಎಚ್.ಮುಹಮ್ಮದ್ ಹನೀಫ್, ಟ್ರಸ್ಟ್‌ನ ಉಪಾಧ್ಯಕ್ಷ ಎಸ್.ಐ. ಮುನೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಂ.ಇ. ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಎಂ.ಬಿ.ನಾಸಿರ್ ಅಹ್ಮದ್ ಸ್ವಾಗತಿಸಿದರು. ಪಿ.ಆರ್.ಒ ಬಿ.ಎಸ್.ರಫೀಕ್ ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News