×
Ad

ಪುನರ್ ಪರಿಶೀಲಿಸುವಂತೆ ಕೇಂದ್ರಕ್ಕೆ ಒತ್ತಾಯ

Update: 2016-09-20 22:12 IST

ಸಾಗರ, ಸೆ.20: ಕೇಂದ್ರ ಸರಕಾರ ಅಡಿಕೆ ತೋಟಗಳಿಗೆ ಹನಿ ನೀರಾವರಿ ಸೌಲಭ್ಯವನ್ನು ರದ್ದುಪಡಿಸಿರುವ ಕ್ರಮವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಮಂಗಳವಾರ ಆಪ್ಸ್ ಕೋಸ್ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಕೇಂದ್ರ ಸರಕಾರದಿಂದ ಅಡಿಕೆ ಬೆಳೆಗಾರರಿಗೆ ಹನಿ ನೀರಾವರಿಗೆ ನೀಡುತ್ತಿದ್ದ ಸಹಾಯಧನವನ್ನು ಏಕಾಏಕಿ ನಿಲ್ಲಿಸಿರುವುದರಿಂದ ಬೆಳೆಗಾರ ವಲಯ ಆತಂಕಕ್ಕೆ ಈಡಾಗಿದೆ. ಧಾರಣೆ ಏರಿಳಿತ, ಕೊಳೆರೋಗ, ಕೃಷಿ ಕೂಲಿಕಾರ್ಮಿಕರ ಸಮಸ್ಯೆಯಿಂದ ಬೆಳೆಗಾರ ಸಮೂಹ ಸಂಕಷ್ಟ ಅನುಭವಿಸುತ್ತಿದೆ ಎಂದರು. ಕೇಂದ್ರ ಸರಕಾರದ ಈ ನೀತಿಯು ಕೃಷಿಕರಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಭರವಸೆ ನೀಡಿದ್ದ ನೀತಿಗೆ ವಿರುದ್ಧವಾಗಿದೆ. ಕೇಂದ್ರ ಸರಕಾರ ಹನಿ ನೀರಾವರಿ ಯೋಜನೆಯ ಸಹಾಯಧನ ಯೋಜನೆಯಡಿ ಅಡಿಕೆ ತೋಟಗಳನ್ನು ತಕ್ಷಣ ಸೇರಿಸಿಕೊಳ್ಳಬೇಕು. ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಆಪ್ಸ್‌ಕೋಸ್ ಸೇರಿದಂತೆ ಬೆಳೆಗಾರರ ಒಕ್ಕೂಟವು ಹನಿ ನೀರಾವರಿ ಸೌಲಭ್ಯದಿಂದ ಅಡಿಕೆ ತೋಟವನ್ನು ಕೈಬಿಟ್ಟಿರುವ ಕ್ರಮದ ಬಗ್ಗೆ ಪುನರ್ ವಿಮರ್ಶೆ ಮಾಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಪ್ರಧಾನಿಗಳು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಅರಿತು ಬೆಲೆ ಕುಸಿತದಿಂದ ಕಂಗಾಲಾಗಿರುವ ಅಡಿಕೆ ಬೆಳೆಗಾರರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಪ್ಸ್‌ಕೋಸ್ ಸಂಸ್ಥೆಯ ಕಟ್ಟಿನಕೆರೆ ಸೀತಾರಾಮಯ್ಯ, ಪಿ.ಎನ್.ಸುಬ್ರಾವ್, ವಿಶ್ವನಾಥ ಹೆಗಡೆ, ಪಾರ್ಶ್ವನಾಥ ವಳಗೆರೆ, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News