ಸ್ನೇಕ್ ಕಿರಣ್‌ಗೆ ಕಚ್ಚಿದ ನಾಗರಹಾವು: ಸ್ಥಿತಿ ಗಂಭೀರ
ಶಿವಮೊಗ್ಗ, ಸೆ.20: ಮನೆಯೊಂದರ ಸಮೀಪ ನಾಗರಹಾವು ಹಿಡಿಯುವ ವೇಳೆ ಹಾವಿನ ಕಡಿತಕ್ಕೊಳಗಾಗಿ ಖ್ಯಾತ ಉರಗ ತಜ್ಞ ಸ್ನೇಕ್ ಕಿರಣ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ. ನಂಜಪ್ಪಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸ್ನೇಕ್ ಕಿರಣ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೆಂಟಿಲೇಟರ್‌ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಮಂಗಳವಾರ ಮಧ್ಯಾಹ್ನ ಕೋಟೆ ರಸ್ತೆಯ ನಿವಾಸಿ ನಾಗರಾಜ್ ಎಂಬವರ ಮನೆಯ ಸಮೀಪ ನಾಗರಹಾವೊಂದು ಕಾಣಿಸಿಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ನೇಕ್ ಕಿರಣ್ ಸ್ಥಳಕ್ಕೆ ಆಗಮಿಸಿ ಹಾವು ಹಿಡಿದಿದ್ದಾರೆ. ಈ ವೇಳೆ ಹಾವು ಸ್ನೇಕ್ ಕಿರಣ್‌ರವರ ಬಲಗೈಗೆ ಕಚ್ಚಿದೆ. ತಕ್ಷಣವೇ ಅವರನ್ನು ಸಾರ್ವಜನಿಕರು ನಂಜಪ್ಪಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ಮೊದಲಲ್ಲ: ಸ್ನೇಕ್ ಕಿರಣ್ ಈ ಹಿಂದೆಯೂ ಹಾವುಗಳ ಸೆರೆ ಹಿಡಿಯುವ ವೇಳೆ ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ಶಿವಮೊಗ್ಗ ನಗರದ ಕಲ್ಲೂರು ಮಂಡ್ಲಿ ಏರಿಯಾದಲ್ಲಿ ಬಿಳಿ ನಾಗರಹಾವೊಂದು ಕೈಗೆ ಕಚ್ಚಿದ್ದ ಪರಿಣಾಮ ಸ್ನೇಕ್ ಕಿರಣ್‌ರವರ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ನಂತರ ಚೇತರಿಸಿಕೊಂಡಿದ್ದರು. ಪ್ರಸಿದ್ಧ್ದಿ:
ಸ್ನೇಕ್ ಕಿರಣ್ ಬೃಹದಾಕಾರದ ಕಾಳಿಂಗ ಸರ್ಪ, ಹೆಬ್ಬಾವು, ನಾಗರಹಾವು ಸೇರಿದಂತೆ ವಿವಿಧ ಪಭೇದದ ಸಾವಿರಾರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅವುಗಳನ್ನು ಸಮೀಪದ ಅರಣ್ಯ ಪ್ರದೇಶಗಳಿಗೆ ಬಿಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಶಿವಮೊಗ್ಗ ಮಾತ್ರವಲ್ಲದೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಅವರು ಹಾವುಗಳನ್ನು ಸೆರೆ ಹಿಡಿಯುವ ಕೆಲಸ ಮಾಡಿದ್ದಾರೆ. ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಸಂಪಾದಿಸಿರುವ ಅವರು, ಯಾವುದೇ ಕಾರಣಕ್ಕೂ ಹಾವುಗಳನ್ನು ಕೊಲ್ಲಬೇಡಿ ಎಂದು ಜನಜಾಗೃತಿ ಮೂಡಿಸುವ ಕೆಲಸ ಕೂಡ ನಡೆಸಿಕೊಂಡು ಬರುತ್ತಿದ್ದಾರೆ.