ಬಾಬಾಬುಡಾನ್ ಗಿರಿ, ಕೊಲ್ಲೂರಿಗೆ ಮಿನಿಬಸ್ ಸಂಚಾರಕ್ಕೆ ಸಚಿವರಿಗೆ ಮನವಿ

Update: 2016-09-20 16:53 GMT

ಚಿಕ್ಕಮಗಳೂರು, ಸೆ.20: ಚಂದ್ರದ್ರೋಣ ಪರ್ವತದ ಬಾಬಾಬುಡಾನ್ ಗಿರಿಯ ದತ್ತಾತ್ರೇಯ ಪೀಠ ಹಾಗೂ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರಕ್ಕೆ ನಗರಗಳಿಂದ ಮಿನಿಬಸ್ ಓಡಿಸುವಂತೆ ಒತ್ತಾಯಿಸಿ ಮಾಜಿ ಎಂಎಲ್‌ಸಿ ಶಾಸಕಿ ಎ.ವಿ. ಗಾಯತ್ರಿ ಶಾಂತೇಗೌಡ ಕೆಎಸ್ಸಾರ್ಟಿಸಿ ಸಚಿವರಿಗೆ ಮನವಿ ಸಲ್ಲಿಸಿದರು.

ಬಾಬಾಬುಡಾನ್ ಗಿರಿಗೆ ನಾನಾ ಕಡೆಗಳಿಂದ ಪ್ರವಾಸಿಗರು ನಿತ್ಯ ಆಗಮಿಸುತ್ತಾರೆ. ಆದರೆ, ಅವರಿಗೆ ಚಿಕ್ಕಮಗಳೂರಿನಿಂದ ಗಿರಿಗೆ ಹೋಗಿ ಬರಲು ಬಸ್‌ಗಳಿಲ್ಲದೆ ತೊಂದರೆಯಾಗಿದೆ. ಗಿರಿ ಶ್ರೇಣಿ ಇದಾಗಿರುವುದರಿಂದ ಮಿನಿ ಬಸ್‌ಗಳ ಸಂಚಾರ ಸುಗಮವಾಗುತ್ತದೆ. ಅದೇ ರೀತಿಯಲ್ಲಿ ಕೊಲ್ಲೂರು ದೇವಾಲಯಕ್ಕೆ ಚಿಕ್ಕಮಗಳೂರು ನಗರದಿಂದ ನೇರ ಬಸ್ ಸಂಚಾರ ವ್ಯವಸ್ಥೆಯಿಲ್ಲ. ಅದಕ್ಕೂ ಹೊಸದಾಗಿ ಮಿನಿ ಬಸ್‌ಗಳನ್ನು ಸಂಚಾರಕ್ಕೆ ಬಿಟ್ಟರೆ ಅನುಕೂಲವಾಗುತ್ತದೆ ಎಂದು ಸೋಮವಾರ ತಮ್ಮ ಮನೆಗೆ ಭೇಟಿ ನೀಡಿದ್ದ ಕೆಎಸ್ಸಾರ್ಟಿಸಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕಳಸಾಪುರ ಬಸ್ ನಿಲ್ದಾಣದ ಆವರಣ ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ಜನರು ಮತ್ತು ವಾಹನಗಳು ಬಂದು ಹೋಗಲು ತೊಂದರೆಯಾಗುತ್ತಿದೆ. ಆವರಣಕ್ಕೆ ಕಾಂಕ್ರಿಟ್ ಹಾಕಿಸಲು ಈ ಹಿಂದೆ 60 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಕಾಮಗಾರಿಗೆ ಅನುಮೋದನೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ, ಮಿನಿ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಬಸ್‌ಗಳು ಬಂದ ಕೂಡಲೇ ಬಾಬಾಬುಡಾನ್ ಗಿರಿ ಮಾರ್ಗ ಮತ್ತು ಕೊಲ್ಲೂರು ಮಾರ್ಗದಲ್ಲಿ ಓಡಿಸಲಾಗುತ್ತದೆ. ಕಳಸಾಪುರ ಬಸ್ ನಿಲ್ದಾಣದ ಆವರಣಕ್ಕೆ ಕಾಂಕ್ರಿಟ್ ಹಾಕಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

  ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಉಪಾಧ್ಯಕ್ಷ ಕೆ.ಎಸ್. ಶಾಂತೇಗೌಡ, ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಜಿಪಂ ಸದಸ್ಯೆ ಪ್ರೇಮಾ ಮಂಜುನಾಥ್, ಜಿಪಂ ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News