ಬಯಲು ಪ್ರದೇಶದಲ್ಲಿ ಕಾಫಿಬೆಳೆಯುವವರ ವಿರುದ್ಧ ಹೋರಾಟ
ಮೂಡಿಗೆರೆ, ಸೆ.20: ಕೆಲವರು ವಿಪರೀತ ಕಾಫಿ ಬೆಳೆಯುವ ದುರಾಸೆಯಿಂದ ಮರಗಿಡಗಳನ್ನು ಕಡಿದು ಬಯಲು ಪ್ರದೇಶದಲ್ಲಿ ನೆರಳು ರಹಿತ ಕಾಫಿ ಬೆಳೆಯಲು ಮುಂದಾಗಿದ್ದಾರೆ. ಇವರ ದುರಾಸೆಗೆ ಪ್ರಕೃತಿ ಬಲಿಯಾಗುತ್ತಿದೆ. ಇಂತಹ ಕಾಫಿ ಬೆಳೆಯುವವರ ವಿರುದ್ಧ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಕೆಜಿಎಫ್ ರಾಜ್ಯಾಧ್ಯಕ್ಷ ಬಿ.ಎಸ್. ಜೈರಾಮ್ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಮಾತನಾಡಿ, ಒಂದು ಎಕರೆ ಕಾಫಿ ಬೆಳೆಯುವ ತೋಟದಲ್ಲಿ 300ರಷ್ಟು ಮರಗಳು ಇರಬೇಕಾಗುತ್ತದೆ. ಇಂತಹ ಸುಸಜ್ಜಿತ ತೋಟಗಳಿಂದಾಗಿ ಮಳೆ ಹೆಚ್ಚಾಗುತ್ತದೆ. ಜೊತೆಗೆ ಪ್ರಾಣಿ ಪಕ್ಷಿಗಳು, ಜೀವ ವೈವಿಧ್ಯಗಳು ಈ ಹಿಂದಿನಿಂದಲೂ ನೈಜತೆಯನ್ನು ಕಾಪಾಡಿಕೊಂಡು ಕಾಫಿ ಕೃಷಿ ನಡೆಸಿಕೊಂಡು ಬರಲಾಗುತ್ತಿದೆ. ಬೆಳೆಗಾರರು ಕೃಷಿಯಲ್ಲಿ ಅಧಿಕ ಲಾಭ ಗಳಿಸುವ ಜತೆಗೆ ಪ್ರಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ಹೇಳಿದರು.
ಈ ಬಗ್ಗೆ ಅರಣ್ಯ ಹಾಗೂ ಪರಿಸರ ಇಲಾಖೆ ಸಹಿತ ಕಾಫಿ ಮಂಡಳಿಗಳು ಒಕ್ಕೂಟದ ವತಿಯಿಂದ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಬೆಳೆಗಾರರ ಹಿತ ರಕ್ಷಣಾ ಮಂಡಳಿ ಮುಂದಾಗದಿದ್ದರೆ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಎಂ. ತೀರ್ಥಮಲ್ಲೇಶ್ ಮಾತನಾಡಿ, ಈ ಬಾರಿ ವಾಡಿಕೆಗಿಂತ ಶೇ. 50ರಷ್ಟು ಮಳೆ ಕಡಿಮೆಯಾಗಿದೆ. ಆದ್ದರಿಂದ ಕಾಫಿ ಗಿಡಗಳಿಗೆ ಕಾಂಡಕೊರಕ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಕಾಫಿ ಮಂಡಳಿ ಕೇಂದ್ರ ಸರಕಾರಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರಾಜ್ಯದ ಕಾಫಿ ಬೆಳೆಗಾರರ ಒಕ್ಕೂಟದ ಮುಖಂಡ ಎಚ್.ಡಿ. ಮೋಹನ್ ಕುಮಾರ್, ತಾಲೂಕು ಅಧ್ಯಕ್ಷ ಬಿ.ಬಿ. ಬಸವರಾಜ್, ಹಾಸನ ಜಿಲ್ಲಾಧ್ಯಕ್ಷ ಕೆ.ಬಿ. ಕೃಷ್ಣಪ್ಪ, ರತೀಶ್, ಡಿ.ಎಂ. ವಿಜಯ್ ಕುಮಾರ್, ಅರೆಕುಡಿಗೆ ಶಿವಣ್ಣ, ಬಾಲಕೃಷ್ಣ, ಮುಜಾಹಿದ್ ಆಲಂ, ಸುಧಾಕರ್, ಎಂ.ಎಚ್. ಪ್ರಕಾಶ್, ಟಿ.ಡಿ. ಮಲ್ಲೇಶ್, ಶಾಂತಪ್ಪಗೌಡ ಮತ್ತಿತರರಿದ್ದರು.