×
Ad

ಕಾವೇರಿ: ಸುಪ್ರೀಂ ತೀರ್ಪಿಗೆ ಖಂಡನೆ; ಸಂಸದ ಸಿ.ಎಸ್.ಪುಟ್ಟರಾಜು ರಾಜೀನಾಮೆ

Update: 2016-09-20 23:43 IST

ಮಂಡ್ಯ, ಸೆ.20: ತಮಿಳುನಾಡಿಗೆ ನೀರು ಬಿಡುವಂತೆ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಸಂಸದ ಸಿ.ಎಸ್.ಪುಟ್ಟರಾಜು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮಂಗಳವಾರ ಸಂಜೆ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಸ್. ಝಿಯಾವುಲ್ಲಾ ಅವರಿಗೆ ಸಂಸದ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ರಾಜ್ಯ ಮತ್ತು ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯ ನೋಡಿಕೊಂಡು ಸಂಸದನಾಗಿ ಮುಂದುವರಿಯಲು ಇಷ್ಟವಿಲ್ಲ. ಆದ್ದರಿಂದ ರಾಜೀನಾಮೆ ನೀಡಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವುದಾಗಿ ಪುಟ್ಟರಾಜು ಸುದ್ದಿಗಾರರಿಗೆ ತಿಳಿಸಿದರು. ತುರ್ತಾಗಿ ಜಿಲ್ಲಾಧಿಕಾರಿ ಮೂಲಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಸಲ್ಲಿಸಿದ್ದೇನೆ. ಅದು ಕ್ರಮಬದ್ಧವಲ್ಲವಾದರೆ ನೇರವಾಗಿ ಲೋಕಸಭಾ ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News