×
Ad

ಕಾವೇರಿ ವಿವಾದ: ಇಂದು ಸರ್ವಪಕ್ಷ ಸಭೆ

Update: 2016-09-20 23:49 IST

ಬೆಂಗಳೂರು, ಸೆ.20: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದು ಹಾಗೂ ಕಾವೇರಿ ನಿರ್ವಹಣೆ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಕುರಿತು ಚರ್ಚಿಸಲು ಸಚಿವ ಸಂಪುಟ ಹಾಗೂ ವಿಧಾನಮಂಡಲದ ಉಭಯ ಸದನಗಳ ಸರ್ವಪಕ್ಷ ನಾಯಕರ ಸಭೆಯನ್ನ್ನು ಕರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಮಂಗಳವಾರ ತನ್ನ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಅವರು, ಸೆ.21ರಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ಹಾಗೂ ಸಂಜೆ 5 ಗಂಟೆಗೆ ವಿಧಾನಮಂಡಲದ ಉಭಯ ಸದನಗಳ ಸರ್ವಪಕ್ಷ ನಾಯಕರು, ಸಂಸದರು ಹಾಗೂ ಕಾವೇರಿ ಕಣಿವೆ ಭಾಗದ ಸಚಿವರ ಸಭೆಯನ್ನು ಕರೆಯಲಾಗಿದೆ ಎಂದರು. ಸೆ.21ರಿಂದ 27ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕಾವೇರಿ ಮೇಲುಸ್ತುವಾರಿ ಸಮಿತಿಯು ಸೆ.21ರಿಂದ 30ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ಮಾಡಿತ್ತು ಎಂದು ಅವರು ಹೇಳಿದರು.

ಕಾವೇರಿ ಮೇಲುಸ್ತುವಾರಿ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿದೆ. ಸೆ.5ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂಕೋರ್ಟ್, ಯಾವುದೇ ಆಕ್ಷೇಪಣೆಗಳಿದ್ದರೆ ಮೂರು ದಿನಗಳ ಒಳಗಾಗಿ ಕಾವೇರಿ ಮೇಲುಸ್ತುವಾರಿ ಸಮಿತಿಯ ಮೊರೆ ಹೋಗಬಹುದು ಎಂದು ಸಲಹೆ ನೀಡಿತ್ತು ಎಂದು ಅವರು ಹೇಳಿದರು.

ಕಾವೇರಿ ಮೇಲುಸ್ತುವಾರಿ ಸಮಿತಿಯು ಸೆ.12 ಹಾಗೂ ಸೆ.19ರಂದು ಸಭೆ ನಡೆಸಿದೆ. ಬಹಳ ದೀರ್ಘವಾಗಿ ನಡೆದ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಇರುವ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ತಾಂತ್ರಿಕ ಹಾಗೂ ಎಂಜಿನಿಯರ್‌ಗಳ ಮೂಲಕ ಅಂಕಿ-ಅಂಶಗಳನ್ನು ಪಡೆದು 10 ದಿನಗಳ ಕಾಲ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು ಎಂದು ಮುಖ್ಯಮಂತ್ರಿ ತಿಳಿಸಿದರು.

ಆದರೆ, ಇವತ್ತು ಸುಪ್ರೀಂಕೋರ್ಟ್ ಸೆ.21ರಿಂದ 27ರವರೆಗೆ ತಮಿಳುನಾಡಿಗೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿ, ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿದೆ. ಅಲ್ಲದೆ, ಕೇಂದ್ರ ಸರಕಾರಕ್ಕೆ ಕಾವೇರಿ ನಿರ್ವಹಣೆ ಮಂಡಳಿ ರಚನೆ ಮಾಡುವಂತೆ ಸೂಚನೆ ನೀಡಿದೆ ಎಂದು ಅವರು ಹೇಳಿದರು.

ಈ ಎಲ್ಲ ವಿಚಾರಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚೆಮಾಡಿ, ಕಾನೂನು ಹಾಗೂ ತಾಂತ್ರಿಕ ತಜ್ಞರ ಸಮಿತಿಗಳ ಅಭಿಪ್ರಾಯ ಪಡೆದು, ರಾಜ್ಯ ಸರಕಾರ ಮುಂದಿನ ಹೆಜ್ಜೆ ಇಡಲಿದೆ. ನಮ್ಮಲ್ಲಿ ನೀರಿಲ್ಲ, ಕುಡಿಯಲೂ ನೀರಿನ ಸಂಕಷ್ಟವಿದೆ ಎಂದು ಮೇಲುಸ್ತುವಾರಿ ಸಮಿತಿ ಎದುರು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅಂಕಿ-ಅಂಶಗಳ ಸಮೇತ ಮನವರಿಕೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಸುಪ್ರೀಂಕೋರ್ಟ್‌ಗೂ ನಮ್ಮ ವಕೀಲರು ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಇಂತಹ ಆದೇಶ ಬಂದಿದೆ. ನಾಳಿನ ಸಭೆಗಳಲ್ಲಿ ಎಲ್ಲ ವಿಚಾರಗಳನ್ನು ಚರ್ಚೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಆವೇಶಕ್ಕೆ ಒಳಗಾಗಬೇಡಿ

ಕಾವೇರಿ ಕಣಿವೆಯಲ್ಲಿನ ರೈತರು ಹಾಗೂ ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು. ಯಾವುದೇ ಕಾರಣಕ್ಕೂ ಆವೇಶಕ್ಕೆ, ಉದ್ವೇಗಕ್ಕೆ ಒಳಗಾಗಬಾರದು. ಸರಕಾರ ನಿಮ್ಮ ಜೊತೆಯಲ್ಲಿದೆ. ರಾಜ್ಯದ ಹಿತ, ರೈತರ ಹಿತ ಕಾಪಾಡಲು ನಾವು ಬದ್ಧವಾಗಿದ್ದೇವೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ.

- ಸಿದ್ದರಾಮಯ್ಯ, ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News