×
Ad

ಸುಪ್ರೀಂ ಆದೇಶ ಪ್ರಧಾನಿ ತಿರಸ್ಕರಿಸಬೇಕು: ಎಚ್.ಡಿ.ದೇವೇಗೌಡ

Update: 2016-09-21 19:14 IST

ಬೆಂಗಳೂರು, ಸೆ.21: ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟ್, ಕೇಂದ್ರ ಸರಕಾರಕ್ಕೆ ನೀಡಿರುವ ಆದೇಶವನ್ನು ಪ್ರಧಾನಮಂತ್ರಿ ತಿರಸ್ಕರಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಬುಧವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ನದಿ ನೀರು ವಿವಾದವು ಎರಡು ರಾಜ್ಯಗಳ ನಡುವೆ ಇರುವಂತಹ ಹೋರಾಟ. ನಾನು ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ಅನ್ನೋ ಭಾವನೆಯಲ್ಲಿ ಈ ಮಾತನ್ನು ಹೇಳ್ತಾ ಇಲ್ಲ. ಸಾಮಾನ್ಯ ರೈತನಾಗಿ ಹೇಳುತ್ತಿದ್ದೇನೆ. ನಮ್ಮ ರಾಜ್ಯದ ಜಲಾಶಯಗಳ ಸ್ಥಿತಿಗತಿ ನೋಡಿ ತೀರ್ಪು ಕೊಟ್ಟಂತೆ ಕಾಣುತ್ತಿಲ್ಲ ಎಂದು ಅವರು ಹೇಳಿದರು.

ಜನತೆಗೆ ಕುಡಿಯುವ ನೀರು ಮುಖ್ಯವೋ? ಬೆಳೆ ಉಳಿಸುವುದು ಮುಖ್ಯವೋ? ಎಂದು ಪ್ರಶ್ನಿಸಿದ ದೇವೇಗೌಡ, 9 ವರ್ಷದಿಂದ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ನಾವು ಸಲ್ಲಿಸಿರುವ ಮೇಲ್ಮನವಿ ಇನ್ನೂ ವಿಚಾರಣೆಗೆ ಬಂದಿಲ್ಲ. ಇಂಥ ಸಂದರ್ಭದಲ್ಲಿ ನಿರ್ವಹಣಾ ಮಂಡಳಿ ರಚನೆಯ ಅಗತ್ಯ ಏನಿತ್ತು? ನ್ಯಾಯಾಂಗದ ಬಗ್ಗೆ ನನಗೆ ಗೌರವ ಇರುವುದರಿಂದಲೆ ಈ ಮಾತು ಹೇಳುತ್ತಿದ್ದೇನೆ ಎಂದರು.

ಕಾವೇರಿಯನ್ನು ಒಡೆದು ಹಾಕಿದ ನ್ಯಾಯಾಧೀಕರಣವದು. ಯಾಕಂದ್ರೆ 2007ರ ತೀರ್ಪಿನ ಬಗ್ಗೆಯೆ ಇಲ್ಲಿಯ ಪೀಠದ ನ್ಯಾಯಾಧೀಶರಲ್ಲೆ ಒಮ್ಮತ ಇರಲಿಲ್ಲ. ಹೀಗಾಗಿ ಕಾವೇರಿ ನ್ಯಾಯಾಧೀಕರಣದ ತೀರ್ಪನ್ನೆ ಪ್ರಶ್ನೆ ಮಾಡಲಾಗಿದೆ ಎಂದು ಅವರು ದೇವೇಗೌಡ ಹೇಳಿದರು.

ಸಿಎಂ ರಾಜೀನಾಮೆ ಬೇಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ರಾಜೀನಾಮೆ ನೀಡುವುದು ಬೇಡ. ಆದರೆ, ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ತೀರ್ಮಾನ ಕೈಗೊಳ್ಳಲಿ. ಮುಂದೆ ಏನಾಗುತ್ತದೊ ನೋಡೋಣ ಎಂದು ಅವರು ತಿಳಿಸಿದರು.

ನಾನು ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೋಗುವುದಿಲ್ಲ. ಈ ಹಿಂದೆ ನಾನು ಮೂರು ಬಾರಿ ರಾಜೀನಾಮೆ ನೀಡಿದ್ದೇನೆ. ಈಗ ರಾಜೀನಾಮೆ ಕೊಟ್ಟರೆ ಸಂಸತ್ತಿನಲ್ಲಿ ಹೋರಾಟ ಮಾಡುವುದು ಯಾರೂ ಎಂದು ದೇವೇಗೌಡ ಪ್ರಶ್ನಿಸಿದರು.

ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವುದಕ್ಕೆ ನನ್ನ ಅಭ್ಯಂತರವಿಲ್ಲ. ನಾಳೆ ಬೆಳಗ್ಗೆಯೆ ಸ್ಪೀಕರ್‌ಗೆ ರಾಜೀನಾಮೆ ಕೊಡುತ್ತೇನೆ. ಆದರೆ, ಲೋಕಸಭೆಯಲ್ಲಿ ಈ ಹೋರಾಟವನ್ನು ಮಾಡುವುದಕ್ಕೆ ಆಗುವುದಿಲ್ಲವಲ್ಲ ಎಂಬ ನೋವಿದೆ. ಒಂದು ಲೋಟ ನೀರಿಗೂ ನಾವು ಅಮ್ಮನ ಮುಂದೆ ಕೈಚಾಚುವ ಪರಿಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನ್ಯಾಯಯುತವಾಗಿಲ್ಲ. ಪ್ರಧಾನಿ ನರೇಂದ್ರಮೋದಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ರಾಜ್ಯ ಸರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಸಿದ್ದರಾಮಯ್ಯಗೂ ಇದೇ ಹೇಳಿದ್ದೇನೆ. ಇರುವ ನೀರಿನಲ್ಲಿ ಬೆಳೆಗೆ ತಪ್ಪಿಸಿ, ಬೆಂಗಳೂರಿಗೆ ನೀರು ಕೊಡಬೇಕಿದೆ. ಆದುದರಿಂದ, ಬೆಂಗಳೂರಿನ ಜನ ಮನೆಯಲ್ಲಿ ಕೂತರೆ ಆಗುವುದಿಲ್ಲ. ಬುದ್ದಿ ಜೀವಿಗಳು ಎಲ್ಲ ಎಲ್ಲಿ ಎಂದು ದೇವೇಗೌಡ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News