×
Ad

ವಶಪಡಿಸಿಕೊಂಡಿದ್ದ 13 ಸಾವಿರ ಎಕರೆ ಭೂಮಿ ರೈತರಿಗೆ ವಾಪಸ್

Update: 2016-09-21 19:30 IST

ಬೆಂಗಳೂರು, ಸೆ. 21: ಕೈಗಾರಿಕಾಭಿವೃದ್ಧಿ ಉದ್ದೇಶಕ್ಕಾಗಿ ‘ಲ್ಯಾಂಡ್ ಬ್ಯಾಂಕ್’ ಯೋಜನೆಯಡಿ ಕೆಐಎಡಿಬಿ ಅಧಿಸೂಚನೆ ಹೊರಡಿಸಿ ವಶಪಡಿಸಿಕೊಂಡಿದ್ದ 38,258 ಎಕ್ರೆ ಪೈಕಿ 13,788 ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಬುಧವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, 2010-12ರಲ್ಲಿ ಕೈಗಾರಿಕಾ ಕಾರಿಡಾರ್ ಮತ್ತು ಲ್ಯಾಂಡ್ ಬ್ಯಾಂಕ್ ಯೋಜನೆಯಡಿ ಪ್ರಾಥಮಿಕ ಅಧಿಸೂಚನೆಗೆ ಒಳಪಟ್ಟಿದ್ದ ರೈತರ ಕೃಷಿ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ತೀರ್ಮಾನಿಸಿದೆ ಎಂದರು.

ಲ್ಯಾಂಡ್ ಬ್ಯಾಂಕ್ ಯೋಜನೆಯಡಿ ಕೈಗಾರಿಕಾಭಿವೃದ್ಧಿ ಉದ್ದೇಶಕ್ಕಾಗಿ ಒಟ್ಟು 1.21 ಲಕ್ಷ ಎಕರೆ ಭೂಮಿಯನ್ನು ಗುರುತಿಸಿದ್ದು, ಆ ಪೈಕಿ 80 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಚಿತ್ರದುರ್ಗ, ದಾವಣಗೆರೆ, ತುಮಕೂರು, ವಿಜಯಪುರ, ರಾಯಚೂರು, ಚಿಕ್ಕಮಗಳೂರು, ಮೈಸೂರು, ಬೆಳಗಾವಿ ಜಿಲ್ಲೆಗಳ ಆ ಪೈಕಿ 38,258 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ.

ಆ ಹಿನ್ನೆಲೆಯಲ್ಲಿ ಎಂಟು ವರ್ಷಗಳಿಂದ ಯಾವುದೇ ಕೈಗಾರಿಕೆಗಳು ಬಂದಿರಲಿಲ್ಲ. ಹೀಗಾಗಿ ಆ ರೈತರು ತಮ್ಮ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಆಗುತ್ತಿರಲಿಲ್ಲ. ಇದನ್ನು ಗಮನಿಸಿ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರಕಾರ 13,788 ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಡದಿ ಸಮೀಪದ ಈಗಲ್‌ಟನ್ ರೇಸಾರ್ಟ್ ಚಾಮುಂಡೇಶ್ವರಿ ಬಿಲ್ಡ್‌ಟೆಕ್ ಪ್ರೆ.ಲಿ. ಒತ್ತುವರಿ ಮಾಡಿದ್ದ 77.16 ಎಕರೆ ಸರಕಾರಿ ಭೂಮಿಗೆ ಮಾರುಕಟ್ಟೆ ದರ 982 ಕೋಟಿ ರೂ. ಬೆಲೆ ನಿಗದಿಪಡಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಭೈರಾಪುರದಲ್ಲಿ ಸರಕಾರಿ ಮಹಿಳಾ ಕಾಲೇಜು ಸ್ಥಾಪಿಸಲು 25.50 ಕೋಟಿ ರೂ.ಗಳನ್ನು ಒದಗಿಸಲು ಒಪ್ಪಿಗೆ ನೀಡಲಾಗಿದೆ. ಸ್ವ ಉದ್ಯೋಗ ಸೃಷ್ಟಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ದೀನ್ ದಯಾಳ್ ಅಂತ್ಯೋದಯ ‘ನಲ್ಮ್ ಯೋಜನೆ’ಯನ್ನು ರಾಜ್ಯದ 271 ಸ್ಥಳೀಯ ಸಂಸ್ಥೆಗಳಲ್ಲಿಯೂ ಅನುಷ್ಠಾನಕ್ಕೆ ಸಂಪುಟ ನಿರ್ಧರಿಸಿದೆ ಎಂದರು.

ಉದ್ದೇಶಿತ ಯೋಜನೆಗೆ ಕೇಂದ್ರ-60 ಹಾಗೂ ರಾಜ್ಯ ಸರಕಾರ 40ರ ಅನುಪಾತದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ಸ್ವ ಉದ್ಯೋಗ ಕಲ್ಪಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಮೇಲ್ಸೇತುವೆ ನಿರ್ಮಾಣ

ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪ ಮಡಿಕೇರಿ-ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಾಣಕ್ಕೆ 29.62 ಕೋಟಿ ರೂಗಳನ್ನು ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News