ತಮಿಳುನಾಡಿಗೆ ನೀರು ಬಿಡದಿರಲು ಒಮ್ಮತದ ನಿರ್ಧಾರ
ಬೆಂಗಳೂರು, ಸೆ.21: ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸದಿರಲು ರಾಜ್ಯ ಸಂಪುಟ ತೀರ್ಮಾನಿಸಿದೆ. ಸೆ.23ರಂದು ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳುವವರೆಗೆ ನೀರು ಬಿಡದಿರಲು ಒಮ್ಮತದಿಂದ ನಿರ್ಧರಿಸಿದೆ.
ಸಂಪುಟ ಸಭೆಗೆ ಮುನ್ನ ವಿಧಾನಸೌದದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಾಯಕರು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸುವುದು ಬೇಡ. ಎಂತಹ ಪರಿಸ್ಥಿತಿ ಬಂದರೂ ಎದುರಿಸೋಣ ಎಂದು ಸರ್ವಪಕ್ಷ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ಸೆ.27ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ವಿವಾದ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದ್ದು, ಅಂದು ವಿಚಾರಣೆಗೆ ಹಾಜರಾಗುವುದು ಬೇಡ ಎಂಬ ಸಲಹೆಯು ವ್ಯಕ್ತವಾಗಿದೆ.
ಬಿಜೆಪಿ ವಿರುದ್ಧ ಗರಂ: ಸರ್ವಪಕ್ಷಗಳ ಸಭೆಗೆ ಬಿಜೆಪಿ ನಾಯಕರು ಗೈರು ಹಾಜರಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಗಳನ್ನು ನೀಡುವುದು ಬೇಜವಾಬ್ದಾರಿತನವಾಗುತ್ತದೆ.
ಇಂತಹ ಕಷ್ಟದ ಸಂದರ್ಭದಲ್ಲಿ ಎಲ್ಲರೂ ಐಕ್ಯತೆ ಯಿಂದಿರಬೇಕು. ಸರಕಾರವು ವಿಶೇಷ ಅಧಿವೇಶನವನ್ನು ಕರೆದು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯ ಅಂಗೀಕರಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ ನಾನು ಕೇಂದ್ರ ಸಚಿವರ ಮನೆ ಬಾಗಿಲಿಗೆ ಹೋಗಲು ಸಿದ್ಧ. ರಾಜ್ಯ ಸರಕಾರದ ಪರ ವಕೀಲ ಫಾಲಿ ಎಸ್.ನಾರಿಮನ್ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿಯೆ ವಾದ ಮಂಡಿಸಿದ್ದಾರೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ, ಸಚಿವರಾದ ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ, ಕಾಗೋಡು ತಿಮ್ಮಪ್ಪ, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಎಚ್.ಎಸ್.ಮಹದೇವಪ್ರಸಾದ್, ಎಚ್.ಸಿ.ಮಹದೇವಪ್ಪ, ತನ್ವೀರ್‌ಸೇಠ್, ಎಂ.ಆರ್.ಸೀತಾರಾಂ, ರಮೇಶ್ ಕುಮಾರ್, ಎ.ಮಂಜು, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ರೋಷನ್‌ಬೇಗ್, ರುದ್ರಪ್ಪ ಲಮಾಣಿ, ಶಾಸಕರಾದ ವೈಎಸ್‌ವಿ ದತ್ತ, ಕೆ.ಎಸ್. ಪುಟ್ಟಣ್ಣಯ್ಯ, ವಿ.ಎಸ್.ಉಗ್ರಪ್ಪ, ಬಸವರಾಜ ಹೊರಟ್ಟಿ, ಟಿ.ಎ.ಶರವಣ, ಸಂಸದರಾದ ವೀರಪ್ಪಮೊಯ್ಲಿ, ರಹ್ಮಾನ್‌ಖಾನ್, ಆಸ್ಕರ್ ಫೆರ್ನಾಂಡಿಸ್, ಕೆ.ಎಚ್.ಮುನಿಯಪ್ಪ, ಡಿ.ಕೆ.ಸುರೇಶ್, ಪ್ರಕಾಶ್ ಹುಕ್ಕೇರಿ, ಎನ್.ಚಂದ್ರಪ್ಪ, ಮುದ್ದಹನುಮೇಗೌಡ, ಧೃವನಾರಾಯಣ್, ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯದರ್ಶಿ ಅರವಿಂದಜಾಧವ್, ರಾಜ್ಯ ಸರಕಾರದ ಪರ ವಕೀಲ ಮೋಹನ್ ಕಾತರಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.