ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ
ಕಾರವಾರ, ಸೆ.21: ಗ್ರಾಮೀಣ ಪ್ರದೇಶದ ಖಾರ್ಗೆ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾಗಿರುವ ಶಾಶ್ವತ ಸೇತುವೆ ನಿರ್ಮಾಣ ಕಾರ್ಯ ಶೀಘ್ರವೇ ಆಗಬೇಕಾಗಿದೆ. ಜನರು ಶಾಶ್ವತ ಸೇತುವೆಗಾಗಿ ಕಾಯುತ್ತಿದ್ದು ಹೊಳೆ ದಾಟಲು ನಿತ್ಯ ಹರಸಾಹಸ ಪಡಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಖಾರ್ಗೇ ಗ್ರಾಮದ ಬಡಜೂಗ್-ಕೆರವಡಿಯ ಕರ್ಕಲ್ ನಡುವೆಯ ನದಿಗೆ ಹಾಗೂ ಮಾಂಡೆಬೋಳಾ-ಕಡಿಯಾ ನಡುವಿನ ಕಾಳಿ ನದಿಯ ಉಪ ನದಿಯಾಗಿರುವ ಕಾಣಿಕೆ (ನೈತಿಸಾವರ)ನದಿಯನ್ನು ಇಲ್ಲಿನ ಜನರು ದೋಣಿ ಮೂಲಕ ದಾಟುತ್ತಿರುವ ಅನಿವಾರ್ಯ ಪರಿಸ್ಥಿತಿ ಸಾಕಷ್ಟು ವರ್ಷಗಳಿಂದ ಇದೆ. ಸುತ್ತುವರಿದು ಸಾಗಬೇಕು: ಬಡಜೂಗ್ ಹಾಗೂ ಕೆರವಡಿಯ ಕರ್ಕಲ್ ನಡುವೆ ಕೆಲವೇ ಕಿ.ಮೀ.ಗಳ ಅಂತರವಿದೆ. ಎರಡು ಕಡೆಗೆ ಬಸ್ ಮೂಲಕ ಸಾಗಬೇಕು ಎಂದರೆ ಸುಮಾರು 15ಕಿ.ಮೀ. ದೂರ ಸುತ್ತುವರಿದು ಸಾಗಬೇಕು. ಆದರೆ ಗ್ರಾಮೀಣ ಪ್ರದೇಶವಾಗಿದ್ದರಿಂದ ಬಸ್ ಸೌಕರ್ಯವೂ ಅಷ್ಟಕಷ್ಟೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು, ಈ ಪ್ರದೇಶದಲ್ಲಿ ಸೇತುವೆ ನಿರ್ಮಾಣವಾದರೆ 15ಕಿ.ಮೀ. ವ್ಯಾಪ್ತಿ ಸುತ್ತುವರಿದು ಪ್ರಯಾಣಿಸುವ ಅಥವಾ ದೋಣಿಯ ಮೂಲಕ ಸಾಗುವ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ. ಅಲ್ಲದೆ ಕೆರವಡಿ, ಮಲ್ಲಾಪುರಕ್ಕೆ ತೆರಳುವ ಜನರ ಪ್ರಯಾಣದ ಅಂತರ ಸಾಕಷ್ಟು ಕಡಿಮೆಯಾಗಲಿದೆ.
ಶಾಲೆ ಇರುವುದು ಅರ್ಧ ಕಿಮೀ. ಅಂತರದಲ್ಲಿ: ಅದರಂತೆ ಮಾಂಡೆಬೋಳಾ-ಕಡಿಯಾದ ಸ್ಥಿತಿಯೂ ಬೇರಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನೈತಿಸಾವರ ನಾರಾಯಣ ಶಾಲೆಯಲ್ಲಿ ಶಿಕ್ಷಣ ಪಡೆಯಲು ಸಾಗಬೇಕು ಎಂದರೆ ಕೇವಲ ಅರ್ಧ ಕಿ.ಮೀ ಸಾಗಬೇಕು. ಆದರೆ ಮಧ್ಯದಲ್ಲಿ ಕಾಳಿ ನದಿಯ ಉಪನದಿಯಾಗಿರುವ ಕಾಣಿಕೆ ಹೊಳೆ ಇರುವುದರಿಂದ ಸುಮಾರು 13 ಕಿ.ಮೀ. ಬಸ್ ಮೂಲಕ ಪ್ರಯಾಣಿಸಬೇಕು. ಇಲ್ಲದಿದ್ದಲ್ಲಿ ಹೊಳೆಯಿಂದ ದೋಣಿಯ ಮೂಲಕ ತೆರಳಬೇಕು. ಇದರಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಹ ಮೀನ-ಮೇಷ ಎಣಿಸುವ ಸ್ಥಿತಿ ಗ್ರಾಮಸ್ಥರದ್ದಾಗಿದೆ.
ಅಕ್ರಮ ಮರಳು ಗಣಿಗಾರಿಕೆ:
ತಾಲೂಕಿನ ಕಾಳಿ ನದಿಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ ಪ್ರದೇಶದಲ್ಲೇ ಮರಳು ಗಣಿಗಾರಿಕೆ ನಡೆಸಬೇಕು. ಆದರೆ ಅದು ನಡೆಯುವುದರ ಜೊತೆಗೆ ಬೇಕಾಬಿಟ್ಟಿಯಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಈ ಪ್ರದೇಶದ ಕಾಣಿಕೆ(ನೈತಿಸಾವರ) ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುವುದರಿಂದ ಹೊಳೆಯ ಆಳದ ಜೊತೆಗೆ ಅಗಲವೂ ಹೆಚ್ಚಾಗಿದೆ. ಇದರಿಂದಾಗಿ ನದಿ ತೀರಗಳು ಕುಸಿಯತ್ತಿರುವುದರಿಂದ ಜನರು ಇನ್ನಷ್ಟು ತೊಂದರೆ ಪಡುವಂತಾಗಿದೆ. ಅಕ್ರಮ ಮರಳುಗಾರಿಕೆ ನಡೆಯುವುದರಿಂದ ಹೊಳೆ ಅಕ್ಕಪಕ್ಕದ ಜನರ ಜಮೀನಿನ ಸವಕಳಿಯಾಗುತ್ತಿದ್ದು ಜನರ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ಸಾರ್ವಜನಿಕರು ತಮ್ಮ ಅವಶ್ಯಕ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ತೆರಳುತ್ತಿದ್ದರು. ಆದರೆ ಈಗ ಮರಳುಗಾರಿಕೆ ಹೆಚ್ಚಾಗಿದ್ದರಿಂದ ಇಲ್ಲಿನ ಪ್ರದೇಶ ಶಾಶ್ವತ ಹೊಳೆಯಾಗಿ ಪರಿಣಮಿಸಿದೆ. ತಾಲೂಕಿನ ಗ್ರಾಮೀಣ ಪ್ರದೇಶವಾದ ಇಲ್ಲಿ ಶಾಶ್ವತ ಸೇತುವೆಗಾಗಿ ಜನರು ಕಳೆದ 7 ದಶಕಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು ಸರಕಾರ ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳಬೇಕಾಗಿದೆ. ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಶಾಶ್ವತ ಸೇತುವೆ ಇಲ್ಲಿನ ಜನರ ಆವಶ್ಯಕತೆಯಾಗಿದೆ. ಎರಡು ಸೇತುವೆಗಳ ನಿರ್ಮಾಣಕ್ಕೆ ತಗಲುವ ವೆಚ್ಚದ ಅಂದಾಜು ಪಟ್ಟಿಯನ್ನು ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲ್ಲಿನ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಜನರು ಆರೋಪಿಸುತ್ತಿದ್ದು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.
-ಸತೀಶ್ ಸೈಲ್, ಶಾಸಕ, ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರ
ಈ ಪ್ರದೇಶದಲ್ಲಿ ಶಾಶ್ವತ ಸೇತುವೆ ನಿರ್ಮಾಣವಾದರೆ ದೂರದ ಪ್ರದೇಶಗಳು ನಮಗೆ ಹತ್ತಿರವಾಗಲಿದೆ. ಜೊತೆಗೆ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ತುಂಬಾ ಸಹಕಾರಿಯಾಗಲಿದೆ. ಈ ಹಿಂದೆ ಯಾವುದೇ ಶಾಸಕರು, ಮಂತ್ರಿಗಳು ಈ ಪ್ರದೇಶಕ್ಕೆ ಬಂದು ಸೇತುವೆ ನಿರ್ಮಾಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಶಾಸಕ ಸತೀಶ ಸೈಲ್ ಅವರು ಸ್ಥಳ ಪರಿಶೀಲನೆ ನಡೆಸಿದ್ದರಿಂದ ಸೇತುವೆ ನಿರ್ಮಾಣದ ನಿರೀಕ್ಷೆ ಹಸಿರಾಗಿದೆ. -ಖಾರ್ಗೆ ಗ್ರಾಮಸ್ಥರು.