ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ:ಬಾಲಚಂದ್ರ
ಚಿಕ್ಕಮಗಳೂರು, ಸೆ.21: ದೃಢನಿಶ್ಚಯ ಮತ್ತು ಛಲದಿಂದ ಪ್ರಾಮಾಣಿಕವಾಗಿ ಅಭ್ಯಾಸಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಬ್ಯಾಂಕಿಂಗ್ ಉದ್ಯೋಗ ಖಚಿತ ಎಂದು ಕಾಪ್ಸೆಟ್ ಮುಖ್ಯಸ್ಥ ತರಬೇತುದಾರ ಆರ್.ಕೆ.ಬಾಲಚಂದ್ರ ಅಭಿಪ್ರಾಯಿಸಿದರು.
ರೋಟರಿ ಕಾಫಿಲ್ಯಾಂಡ್ ವತಿಯಿಂದ ಎಂಇಎಸ್ ಆವರಣದಲ್ಲಿ ಐಬಿಪಿಎಸ್ ಸಾಮಾನ್ಯ ಪ್ರವೇಶ ಪರೀಕ್ಷೆಗಾಗಿ ಆಯೋಜಿಸಿರುವ 10 ದಿನಗಳ ತ್ವರಿತಗತಿಯ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ವಿದ್ಯೆ ಮಾರಾಟದ ವಸ್ತುವಲ್ಲ. ವಿದ್ಯೆಯನ್ನು ಹಂಚಿದಾಗ ಮಾತ್ರ ಅದು ವೃದ್ಧಿಸುತ್ತದೆ. ವಿದ್ಯೆಗೆ ಆಸಕ್ತಿ ಮುಖ್ಯ ಎಂದರು.
ಖಾಸಗಿ ಕೋಚಿಂಗ್‌ಕ್ಲಾಸ್‌ಗಳು ಹಣಮಾಡುವ ಅವಾಂತರದಲ್ಲಿ ಬ್ಯಾಂಕ್ ಅಧಿಕಾರಿಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೂತವಾಗಿ ಚಿತ್ರಿಸಲಾಗಿದೆ. ವಾಸ್ತವವಾಗಿ ಸಿಲಬಸ್‌ನ್ನು ಮೂರುತಿಂಗಳು ಪರಿಶ್ರಮದಿಂದ ಅಭ್ಯಾಸಮಾಡಿ ಪೂರ್ಣಮನಸ್ಸಿನಿಂದ ಪರಿಶ್ರಮಿಸಿದರೆ ಐಬಿಪಿಎಸ್ ಕಷ್ಟವಾಗಲಾರದು ಎಂದರು.
ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಆನಂದ ಸಿ.ಹೆಗ್ಡೆ ಮಾತನಾಡಿ, ಗ್ರಾಮೀಣ ಬ್ಯಾಂಕ್‌ನಲ್ಲಿ 650ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿದೆ. ಕರ್ನಾಟಕದ 10 ಜಿಲ್ಲೆಗಳಲ್ಲಿ ಕೆಜಿಬಿ ಕಾರ್ಯನಿರ್ವಹಿಸುತ್ತಿದೆ. ಶೇ.25ರಷ್ಟು ಕೇಂದ್ರಸರಕಾರ, ಶೇ.35 ಪ್ರಾಯೋಜಿತ ಬ್ಯಾಂಕ್ ಮತ್ತು ಶೇ.15 ರಾಜ್ಯಸರಕಾರ ಷೇರುಗಳನ್ನು ಹೊಂದಿದೆ. ಇಲ್ಲೂ ಉತ್ತರರಾಜ್ಯಗಳ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ನುಡಿದರು.
ಎಂ.ಇ.ಎಸ್.ಆಡಳಿತಾಧಿಕಾರಿ ಶಾಂತಕುಮಾರಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವತಿಯರು ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ. ಇಲ್ಲಿ ನಡೆಯುವ ತರಗತಿಗಳಿಗೆ ಸಕಾಲದಲ್ಲಿ ಬಂದು ಪೂರ್ಣಮನಸ್ಸಿನಿಂದ ಪಾಲ್ಗೊಂಡರೆ ಐಬಿಪಿಎಸ್ ಉತ್ತೀರ್ಣರಾಗಬಹುದು ಎಂದು ಹೇಳಿದರು.
ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಆರ್.ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಜಿಬಿ ಹಿರಿಯ ವ್ಯವಸ್ಥಾಪಕ ದಾಮೋದರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ರೋಟರಿ ಯೋಜನಾ ನಿರ್ದೇಶಕ ಎಸ್.ಎನ್.ಸಚ್ಚಿದಾನಂದ ಪ್ರಾಸ್ತಾವಿಸಿದರು. ನಾಗೇಂದ್ರ ಸ್ವಾಗತಿಸಿ, ವಿವೇಕ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಜಯಕುಮಾರ್ ವಂದಿಸಿದರು.