×
Ad

ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಿ: ಡಿಸಿ ರಿಚರ್ಡ್

Update: 2016-09-21 22:08 IST

ಮಡಿಕೇರಿ, ಸೆ.21: ಮಾನವ ಚಿರಾಯುವಾಗಲು ಸಾಧ್ಯವಿಲ್ಲವಾದರೂ ಪುಸ್ತಕಗಳು ಎಂದಿಗೂ ಚಿರಾಯುವಾಗಿರುತ್ತವೆ. ಜ್ಞಾನದ ಎಲ್ಲೆಗಳನ್ನು ವಿಸ್ತರಿಸುವ ಓದಿನ ಅಭಿರುಚಿಯನ್ನು ಮಕ್ಕಳಲ್ಲಿ ಹೆಚ್ಚಿಸಲು ಪ್ರಯತ್ನಿಸಬೇಕೆಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸಲಹೆ ನೀಡಿದರು.

ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರ ಮತ್ತು ಹೊಸ್ಕೇರಿ ಅರೆಕಾಡಿನ ಸ್ಪ್ರೌಟ್ ವುಮೆನ್ ಫಾರ್ಮರ್ಸ್‌ ಕ್ಲಬ್‌ನ ವತಿಯಿಂದ ಸಿಂಗಾಪುರದಲ್ಲಿ ನೆಲೆಸಿರುವ ಜಿಲ್ಲೆಯ ನಿಶಿ ಕುಟ್ಟಣ್ಣ ಸಂಗ್ರಹಿಸಿ ಕಳುಹಿಸಿರುವ ವಿವಿಧ ವಿಚಾರಗಳ ಪುಸ್ತಕಗಳನ್ನು ಜಿಲ್ಲೆಯ ವಿವಿಧ ಶಾಲೆಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

ಪ್ರಸ್ತುತ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಆಕರ್ಷಣೆೆ ಸೇರಿದಂತೆ ವಿವಿಧ ವಿಚಾರಗಳು ಮಕ್ಕಳ ಏಕಾಗ್ರತೆಯನ್ನು ಹಾಳುಗೆಡವುತ್ತಿವೆ. ಹಿಂದೆ ಶಾಲೆಗಳಲ್ಲಿ ಪುಸ್ತಕಗಳ ವಾಚನಕ್ಕೆ ನಿಗದಿತ ತರಗತಿಗಳು ಇರುತ್ತಿದ್ದವು. ಹಿರಿಯ ಸಾಹಿತಿಗಳ ಸಾಹಿತ್ಯ ಬದುಕನ್ನು ಉತ್ತಮವಾಗಿ ಮುನ್ನಡೆಸಲು ಮಾರ್ಗ ದರ್ಶಕವಾಗಿ ಇರುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಓದು ವ್ಯಕ್ತಿಯ ಚಿಂತನೆಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬುತ್ತದೆ ಎಂದರು.

ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಮಾತನಾಡಿ, ಜ್ಞಾನ ಎನ್ನುವುದು ಶಕ್ತಿ. ಇಂತಹ ಅರಿವಿನ ಶಕ್ತಿ ಕೆಟ್ಟ ಭಾವನೆಗಳನ್ನು ತೊಡೆದು ಸದ್ವಿಚಾರಗಳ ಮೂಲಕ ಉತ್ತಮ ಭಾವನೆಗಳನ್ನು ಮೂಡಿಸಲು ಸಾಧ್ಯವಾಗಿದೆ ಎಂದರು. ವಿವಿಧ ವಿದ್ಯಾಸಂಸ್ಥೆಗಳಿಗೆ ಪುಸ್ತಕಗಳನ್ನು ನೀಡುವ ಇಂತಹ ಸಾಹಿತ್ಯ ಪರವಾದ ಕಾರ್ಯಕ್ರಮಗಳಿಗೆ ವಿದ್ಯಾಭವನದ ಅಧ್ಯಕ್ಷನಾಗಿ ಇರುವವರೆಗೆ ಸಭಾಂಗಣವನ್ನು ಉಚಿತವಾಗಿ ಒದಗಿಸುವುದಾಗಿ ಸ್ಪಷ್ಟಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜು ಮಾತನಾಡಿ, ಓದುವ ಹವ್ಯಾಸ ಎಲ್ಲರಿಗೂ ಅವಶ್ಯ. ಹೀಗಿದ್ದೂ ಇಂದು ದೂರದರ್ಶನ ಸೇರಿದಂತೆ ವಿವಿಧ ವಿಚಾರಗಳು ಜ್ಞಾನಾರ್ಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಎನ್ನುವುದು ಇದ್ದೇ ಇರುತ್ತದೆ. ಇಂತಹ ಪರೀಕ್ಷೆಗಳನ್ನು ಓದಿನ ಹವ್ಯಾಸವನ್ನು ಬೆಳೆಸಿಕೊಂಡಾಗ ಮಾತ್ರ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ನಬಾರ್ಡ್ ಜಿಲ್ಲಾ ಪ್ರಬಂಧಕ ಎಂ.ಸಿ. ನಾಣಯ್ಯ ಮಾತನಾಡಿ, ವಿದ್ಯಾಸಂಸ್ಥೆಗಳಿಗೆ ವಿವಿಧ ಪುಸ್ತಕಗಳನ್ನು ನೀಡುವ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಆದ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮವನ್ನು ನಬಾರ್ಡ್ ಮೂಲಕ ಆಯೋಜಿಸುವುದಾಗಿ ತಿಳಿಸಿದರು.

ಫೀ.ಮಾ. ಕಾರ್ಯಪ್ಪಕಾಲೇಜಿನ ಇಂಗ್ಲಿಷ್ ವಿಷಯದ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ನಯನಾ ಕಶ್ಯಪ್ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ವ್ಯವಸ್ಥೆಯ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವಿಚಾರಗಳಿಗೆ ಮಾರು ಹೋಗುತ್ತಿರುವುದಕ್ಕೆ ನಾವೂ ಹೊಣೆಗಾರರಾಗುತ್ತೇವೆ. ಮೊದಲನೆಯದಾಗಿ ಮಕ್ಕಳಿಗೆ ಪೋಷಕರಾದ ನಾವೇ ಮಾದರಿಯಾಗಬೇಕು. ನಾವೇ ಪುಸ್ತಕಗಳನ್ನು ಓದದೆ ಮಕ್ಕಳನ್ನು ಓದುವಂತೆ ಹೇಳುವುದರಿಂದ ಯಾವುದೇ ಪ್ರಯೋಜನವಾಗಲಾರದೆಂದು ಅಭಿಪ್ರಾಯಪಟ್ಟರು.

ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪಮಾತನಾಡಿ, ಶಿಕ್ಷಕ ಸಮೂಹ ತಾವೇ ಮಾದರಿಯಾಗುವ ಮೂಲಕ ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕೆಂದು ಕರೆ ನೀಡಿದರು.

ನಿವೃತ್ತ ಪ್ರಾಂಶುಪಾಲೆ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಪುಷ್ಪಾಕುಟ್ಟಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಇದೇ ಸಂದರ್ಭ ವಿವಿಧ ಶಾಲೆಗಳಿಗೆ ಅತಿಥಿ ಗಣ್ಯರು ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿಷ್ಣು ಪ್ರಸಾದ್, ಅನನ್ಯಾ, ಕಾವೇರಮ್ಮ ಮತ್ತು ದೇವಯ್ಯ ನೀತಿ ಕಥೆಗಳನ್ನು ಹೇಳುವ ಮೂಲಕ ಗಮನ ಸೆಳೆದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಮತ್ತು ಎಚ್.ಟಿ. ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಅರೆಕಾಡಿನ ಸ್ಪ್ರೌಟ್ಸ್ ವುಮೆನ್ ಫಾರ್ಮರ್ಸ್‌ ಕ್ಲಬ್ ಕಾರ್ಯದರ್ಶಿ ದರ್ಶನ್ ಗಣಪತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News