ಮಹಾನಗರ ಪಾಲಿಕೆ ಆಯುಕ್ತೆ, ಮೇಯರ್‌ರಿಂದ ದೌರ್ಜನ್ಯ: ಆರೋಪ
ಶಿವಮೊಗ್ಗ, ಸೆ. 21: ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಮತ್ತು ಮೇಯರ್ ಎಸ್.ಕೆ.ಮರಿಯಪ್ಪನವರು ನಾಗರಿಕರಾದ ಎಸ್.ಎನ್.ಲಿಂಗೇಶ್ ಹಾಗೂ ಸಂಘಟನೆಯ ಮುಖಂಡ ಎಸ್.ಎಲ್. ನಿಖಿಲ್ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ. ಇವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಜ್ಯ ಮಾನವ ಹಕ್ಕುಗಳ ರಕ್ಷಣೆ-ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಮನವಿ ಪತ್ರ ಅರ್ಪಿಸಿತು. ಆ.24 ರಂದು ಸಂಜೆ 4:30ರ ವೇಳೆ ಪಾಲಿಕೆಯ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಲೋಕಾಯುಕ್ತ ಹಾಗೂ ನ್ಯಾಯಾಲಯದ ಆದೇಶವನ್ನು ಪರಿಗಣಿಸದೆ ಪ್ರಕರಣವೊಂದನ್ನು ವಿಲೇವಾರಿ ಮಾಡಿರುವ ಬಗ್ಗೆ ಆಯುಕ್ತೆಯ ಬಳಿ ಇವರಿಬ್ಬರು ತೆರಳಿ ಮಾಹಿತಿ ಕೇಳಿದಾಗ ಅವರು, ಫೈಲನ್ನು ಮುಖಕ್ಕೆ ಎಸೆದು ಕಚೇರಿಯಿಂದ ಹೊರಟು ಹೋಗುವಂತೆ ಅಸಭ್ಯವಾಗಿ ವರ್ತಿಸಿ ಮಾನವ ಹಕ್ಕು ಉಲ್ಲಂಘನೆ ಮಾಡಿದ್ದಾರೆಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸುವಾಗ ಮೊಬೈಲ್‌ನ್ನು ಕಸಿದು ಒಡೆದು ಹಾಕಿದ್ದಾರೆ. ಮೇಯರ್ ಎಸ್.ಕೆ. ಮರಿಯಪ್ಪ ಈ ವೇಳೆ ಧಾವಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಲು ಕೋಟೆ ಠಾಣೆಗೆ ಹೋದರೆ ದೂರನ್ನು ತಿರಸ್ಕರಿಸಿ ಸುಮಾರು 4 ಗಂಟೆಗಳ ಕಾಲ ತಮ್ಮನ್ನು ಸತಾಯಿಸಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ಮನವಿ ಸಲ್ಲಿಕೆ ವೇಳೆ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಯಾದವ್, ಎಸ್.ಎಲ್.ನಿಖಿಲ್, ಮಂಜುನಾಥ್ ಪೂಜಾರಿ, ಸಿ. ಕುಮಾರ್ ಉಪಸ್ಥಿತರಿದ್ದರು.